ಉದಯವಾಹಿನಿ, ಬೆಂಗಳೂರು:  ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಉದ್ರಿಕ್ತ ಪರಿಸ್ಥಿತಿಯ ನಡುವೆ ಕಾಶ್ಮೀರದಲ್ಲಿ ಸಿಲುಕಿಕೊಂಡಿದ್ದ ರಾಜ್ಯದ 13 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು. ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ರಾಜ್ಯದ ಈ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಭಯೋತ್ಪಾದಕರು ಪಹಲ್ಲಾಮ್‌ನಲ್ಲಿ ಪ್ರವಾಸಿಗರ ಮೇಲೆ ಪೈಶಾಚಿಕ ದಾಳಿ ನಡೆಸಿದ ನಂತರ ಭಾರತವು ನೆರೆಯ ರಾಷ್ಟಕ್ಕೆ ತಕ್ಕ ತಿರುಗೇಟು ನೀಡಿತ್ತು. ಈ ಸಂದರ್ಭದಲ್ಲಿ ಯುದ್ಧ ಸನ್ನಿವೇಶ ತಲೆದೋರಿತ್ತು. ತಮ್ಮನ್ನು ರಕ್ಷಣೆ ಮಾಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ನಾನು ಚನ್ನಪಟ್ಟಣದ ಕಾರ್ಯಕ್ರಮದಲ್ಲಿ ಭಾವಿಯಾಗಿದ್ದ ಸಂದರ್ಭದಲ್ಲಿ ತಗಚಗೆರೆ ಗ್ರಾಮದ ಜೆಡಿಎಸ್ ಮುಖಂಡರು ಈ ಬಗ್ಗೆ ಮನವಿ ಮಾಡಿದರು.

ತಮ್ಮ ಪುತ್ರ ಹರ್ಷಿತ್ ಅವರು ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದು, ಯುದ್ಧ ಭೀತಿಯಿಂದ ಅವರನ್ನು ಕರ್ನಾಟಕಕ್ಕೆ ಕರೆತರಲು ನನ್ನ ಸಹಾಯ ಕೋರಿದರು. ಅಲ್ಲದೆ, ಕರ್ನಾಟಕದ ಇನ್ನೂ ಹಲವಾರು ವಿದ್ಯಾರ್ಥಿಗಳು ಅಲ್ಲಿ ಓದುತ್ತಿರುವ ಮಾಹಿತಿ ಸಿಕ್ಕಿತು.  ಕೂಡಲೇ ನಾನು ಈ ವಿಷಯವನ್ನು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ತಂದಾಗ ಅವರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು ಹಾಗೂ ಮಕ್ಕಳ ರಕ್ಷಣೆಗಾಗಿ ತಮ್ಮ ಸಚಿವಾಲಯದ ಅಧಿಕಾರಿಗಳನ್ನು ನಿಯೋಜಿಸಿದರು. ಈ ಮೂಲಕ ಕೃಷಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕರ್ನಾಟಕದ 13 ವಿದ್ಯಾರ್ಥಿಗಳನ್ನು ಮರಳಿ ನಮ್ಮ ನಾಡಿಗೆ ಕರೆತರುವ ವ್ಯವಸ್ಥೆಯನ್ನು ತ್ವರಿತಗತಿಯಲ್ಲಿ ಮಾಡಲಾಯಿತು ಎಂದು ನಿಖಿಲ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!