ಉದಯವಾಹಿನಿ, ಬೆಂಗಳೂರು: “ಕೆಲವೇ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬರಲಿದೆ. ನಂತರ ಸ್ವಚ್ಛತಾ ಅಭಿಯಾನದ ಮೂಲಕ ನಗರದಲ್ಲಿ ಕಸ ವಿಲೇವಾರಿ ಮಾಡಿ ಸ್ವಚ್ಛ ಬೆಂಗಳೂರು ನಿರ್ಮಿಸಲಾಗುವುದು. ಆ ಮೂಲಕ ಬೆಂಗಳೂರಿಗೆ ಹೊಸ ರೂಪ ನೀಡಲಾಗುವುದು” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 4 ಎಂಎಲ್ ಡಿ ಸಾಮರ್ಥ್ಯದ ಜಲಾಗಾರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಅವರು ಮಾತನಾಡಿದರು.
“ಇಂದು ಶಂಕುಸ್ಥಾಪನೆ ಮಾಡಿರುವ ಯೋಜನೆ ಸುಮಾರು 30 ಸಾವಿರ ಮನೆಗಳು, 2.50 ಲಕ್ಷ ಜನರಿಗೆ ನೀರು ಪೂರೈಸಲಿದೆ. ಈ ಕ್ಷೇತ್ರದಲ್ಲಿ ರಸ್ತೆಗೆ 130 ಕೋಟಿ, ಮೇಲ್ಸೇತುವೆಗೆ 43 ಕೋಟಿ, 320 ಕೋಟಿ ಇತರೆ ವಾರ್ಡ್ ಅಭಿವೃದ್ಧಿಗೆ, 650 ಕೋಟಿ ವೆಚ್ಚದಲ್ಲಿ ಹೊಸ ಫ್ಲೈಓವರ್, ನಿಮ್ಮ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ನಿಮ್ಮ ಮನೆಬಾಗಿಲಿಗೆ ಉಚಿತವಾಗಿ ರವಾನಿಸಲಾಗುವುದು. ಇದನ್ನು ಸದ್ಯದಲ್ಲೇ ದೊಡ್ಡ ಆಂದೋಲನದ ರೀತಿಯಲ್ಲಿ ಮಾಡಲಾಗುವುದು. 50X80 ವಿಸ್ತೀರ್ಣದಲ್ಲಿ ಮನೆ ನಿರ್ಮಿಸಲು ಪ್ಲಾನ್ ಅನುಮತಿ ಪಡೆಯಲು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ನಂಬಿಕೆ ನಕ್ಷೆ ಯೋಜನೆ ಜಾರಿ ಮಾಡಲಾಗುವುದು” ಎಂದು ಹೇಳಿದರು.
“ಗ್ರೇಟರ್ ಬೆಂಗಳೂರು ಮೂಲಕ ಬೆಂಗಳೂರಿಗೆ ಹೊಸ ರೂಪ ನೀಡಲಾಗುತ್ತಿದೆ. ಎರಡು ಮೂರು ದಿನಗಳಲ್ಲಿ ಇದು ಚಾಲನೆಯಾಗಲಿದೆ. ಇದಾದ ತಕ್ಷಣ ಬೆಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನ ಮಾಡಲಾಗುವುದು. ಪಾಲಿಕೆಯ ಸಹಾಯವಾಣಿ ನೀಡಿ ಬೆಂಗಳೂರಿನಲ್ಲಿ ಎಲ್ಲಿ ಕಸ ಇದೆ ಎಂದು ಸಾರ್ವಜನಿಕರು ಹೇಳಿದರೂ ಪಾಲಿಕೆ ವತಿಯಿಂದ ಅದನ್ನು ಸ್ವಚ್ಛಗೊಳಿಸಲಾಗುವುದು. ಆಮೂಲಕ ಸ್ವಚ್ಛ ಬೆಂಗಳೂರು ರೂಪಿಸಲಾಗುವುದು” ಎಂದರು.

Leave a Reply

Your email address will not be published. Required fields are marked *

error: Content is protected !!