ಉದಯವಾಹಿನಿ, ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಮೂವರು ಭಯೋತ್ಪಾದಕರಲ್ಲಿ ಒಬ್ಬನಾದ ಆಮಿರ್ ನಜೀರ್ ವಾನಿಯ ಭಾವನಾತ್ಮಕ ವೀಡಿಯೊ ಹೊರಬಿದ್ದಿದೆ. ಈ ವಿಡಿಯೋದಲ್ಲಿ, ಅಮೀರ್ ಅವರ ತಾಯಿ ಕೊನೆಯ ಬಾರಿಗೆ ವೀಡಿಯೊ ಕರೆಯಲ್ಲಿ ಶರಣಾಗುವಂತೆ ಬೇಡಿಕೊಳ್ಳುತ್ತಿರುವುದು ಕಂಡುಬರುತ್ತದೆ, ಆದರೆ ಅಮೀರ್ ಸ್ಪಷ್ಟವಾಗಿ ಶಸ್ತ್ರಾಸ್ತ್ರ ಕೆಳಗಿಡಲು ನಿರಾಕರಿಸಿದ್ದು ಸೈನ್ಯ ಬರಲಿ, ಆಮೇಲೆ ನೋಡುತ್ತೇನೆ ಎಂದು ಹೇಳಿದ್ದ ಕೆಲ ಕ್ಷಣಗಳಲ್ಲೇ ಸೇನೆಯ ಗುಂಡಿಕ್ಕಿ ಬಲಿಯಾಗಿದ್ದಾನೆ.
ಎನ್ಕೌಂಟರ್ ನಡೆಯುವ ಮೊದಲು ಆಮಿರ್ ತನ್ನ ಸಹಚರರೊಂದಿಗೆ ಅಡಗಿಕೊಂಡಿದ್ದ ಮನೆಯಿಂದ ಈ ವೀಡಿಯೊ ಕರೆಯನ್ನು ಮಾಡಿದ್ದಾನೆ. ಕರೆಯ ಸಮಯದಲ್ಲಿ ಅವನ ತಾಯಿ ಮತ್ತು ಸಹೋದರಿ ಅವನನ್ನು ಮನವೊಲಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ ಅವನು ಒಪ್ಪಲಿಲ್ಲ. ಇಷ್ಟು ಮಾತ್ರವಲ್ಲದೆ, ಅವನು ತನ್ನ ಸಹ ಭಯೋತ್ಪಾದಕ ಆಸಿಫ್ ಅಹ್ಮದ್ ಶೇಖ್ ನ ಸಹೋದರಿಯೊಂದಿಗೆ ಮಾತನಾಡಿದ್ದನು. ಅವಳು ತನ್ನ ಸಹೋದರನ ಬಗ್ಗೆ ಮಾಹಿತಿ ಕೇಳಿದಳು. ಎನ್‌ಕೌಂಟರ್ ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು ಈ ಕರೆ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದು, ಅವರನ್ನು ಆಮಿರ್ ನಜೀರ್ ವಾನಿ, ಆಸಿಫ್ ಅಹ್ಮದ್ ಶೇಖ್ ಮತ್ತು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದ್ದು, ಎಲ್ಲರೂ ಪುಲ್ವಾಮಾ ನಿವಾಸಿಗಳು. ಮೂವರೂ ಜೈಶ್-ಎ-ಮೊಹಮ್ಮದ್ ಜೊತೆ ಸಂಬಂಧ ಹೊಂದಿದ್ದರು ಮತ್ತು ದೀರ್ಘಕಾಲದವರೆಗೆ ಭದ್ರತಾ ಪಡೆಗಳ ಕಣ್ಗಾವಲಿನಲ್ಲಿದ್ದರು.
