ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಅವರ ರಾಷ್ಟ್ರ ವಿರೋಧಿ ಮಾನಸಿಕತೆ ಇಷ್ಟಪಡದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಮ ಭಾರತೀಯ ಸೇನೆಗೆ ಬೆಂಬಲಿಸಿ ಮಾತಾಡಿದ್ದಾರೆ. ಅವರ ನಡೆಗೆ ಅಭಿನಂದನೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧ ಮೋಹನ್ ಆಗರ್ ವಾಲ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಮಾಯಕರ ಮೇಲೆ ರಕ್ತದೋಕುಳಿ ಹರಿಸಿದ್ದ ಉಗ್ರರಿಗೆ ತಕ್ಕ ಪಾಠ ಕಲಿಸುವುದು ಭಾರತೀಯ ಸೇನಾ ಪಡೆಗಳು ಪ್ರಮುಖ ಗುರಿಯಾಗಿತ್ತು. ಇದರ ಉದ್ದೇಶ ಈಡೇರಿದೆ. ಆತಂಕವಾದಿಗಳಿಗೆ ಶಿಕ್ಷೆ ಕೊಡುವುದರ ಜೊತೆಗೆ ಖಡಕ್ ಸಂದೇಶ ನೀಡುವುದು ನಮ ಉದ್ದೇಶವಾಗಿತ್ತು ಎಂದು ಹೇಳಿದರು.ಪಾಕಿಸ್ತಾನ ಮೇ 9 ರಂದು ಅಮೇರಿಕಾದೊಂದಿಗೆ ಬೇಡಿಕೊಳ್ಳುತ್ತಿತ್ತು ಎಂದರೆ ಅಂದೇ ಕದನ ವಿರಾಮ ಜಾರಿಯಾಗಿತ್ತು. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮಾತನಾಡುವ ಚಾಳಿ, ಹಾಗಾಗಿ ಏನೇನೋ ಮಾತನಾಡುತ್ತಾರೆ. ಚಲಿಸುತ್ತಿರುವ ಟ್ರೈನ್ ನೋಡಿ, ಟ್ರೈನ್ ಹೋಗುತ್ತಿದೆ ಎಂದು ಹೇಳಿದಂತಾಗಿದೆ ಟ್ರಂಪ್ ಧೋರಣೆ. ಕದನ ವಿರಾಮ ನಿರ್ಧಾರದ ನಂತರ ಟ್ರಂಪ್ ಈ ಮಾತನ್ನು ಹೇಳಿದ್ದಾರೆ. ಕದನ ವಿರಾಮದ ಬಗ್ಗೆ ಮೊದಲು ನಮ ಡಿಜಿಎಂಒ ಅವರನ್ನು ಸಂಪರ್ಕಿಸಿದ್ದು ಪಾಕ್ ಡಿಜಿಎಂಒ. ಎರಡು ಸಲ ಅವರು ಸಂಪರ್ಕಿಸಿ ಕದನ ವಿರಾಮಕ್ಕೆ ಅಂಗಲಾಚಿದರು. ಕದನ ವಿರಾಮದ ಬಗ್ಗೆ ಪ್ರಧಾನಿಯವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಇದರ ಬಗ್ಗೆ ಹೆಚ್ಚಿನ ಚರ್ಚೆ ಬೇಡ ಎಂದು ಮನವಿ ಮಾಡಿದರು.
ಇದು ಕದನ ವಿರಾಮ ಅಷ್ಟೇ, ಯುದ್ಧ ಜಾರಿಯಲ್ಲಿರುತ್ತದೆ. ಪಾಕ್ ಮತ್ತೆ ದಾಳಿ ನಡೆಸಿದರೆ ಯುದ್ಧ ಮುಂದುವರೆಯುತ್ತದೆ. ಮೋದಿಯವರ ನೇತೃತ್ವದಲ್ಲಿ ಭಾರತೀನೆ ಸೇನೆ ಎಲ್ಲ ಯುದ್ಧ ನಿಯಮ ಪಾಲಿಸಿ ಪ್ರತೀಕಾರ ತೀರಿಸಿದ್ದಾರೆ.
