ಉದಯವಾಹಿನಿ, ತುಮಕೂರು: ನಗರದ ವಿಜಯನಗರ, ದೇವನೂರು ಚರ್ಚ್ ಸಪ್ತಗಿರಿ ಬಡಾವಣೆ ರಸ್ತೆಗಳು ಗುಂಡಿಗಳಿಂದ ತುಂಬಿಕೊಂಡಿದ್ದು, ಕನಿಷ್ಠ ಮಣ್ಣು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿಲ್ಲ. ವಿಜಯನಗರ, ದೇವನೂರು, ಜೋಗರಹಟ್ಟಿ, ಕನ್ನಪ್ಪನ ಪಾಳ್ಯ, ಶ್ರೀನಿಧಿ ಬಡಾವಣೆ, ಸಪ್ತಗಿರಿ ಬಡಾವಣೆಗಳು ಮಹಾನಗರ ಪಾಲಿಕೆಯ 30ನೇ ವಾರ್ಡ್ ವ್ಯಾಪ್ತಿಗೆ ಒಳಪಡುತ್ತವೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ಬಹುತೇಕ ರಸ್ತೆಗಳು ಹಾಳಾಗಿವೆ. ಪ್ರಮುಖ ಪ್ರದೇಶಗಳಲ್ಲಿ ಚರಂಡಿ ಸಂಪರ್ಕವೇ ಇಲ್ಲ. ಮುಖ್ಯರಸ್ತೆಗಳನ್ನು ಹೊರೆತುಪಡಿಸಿದರೆ ಅಡ್ಡರಸ್ತೆಗಳು ಡಾಂಬರು ಕಂಡು ವರ್ಷಗಳೇ ಉರುಳಿವೆ.
ದೇವನೂರು ಚರ್ಚ್ ಮುಂಭಾಗದ ರಸ್ತೆಯಲ್ಲಿ ಗುಂಡಿಗಳು ಬಿದ್ದು ಸುಮಾರು ನಾಲ್ಕು ವರ್ಷ ಕಳೆದರೂ ಮುಚ್ಚಿಲ್ಲ. ಇದುವರೆಗೆ ಹತ್ತಾರು ಜನ ಗುಂಡಿಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಮಳೆ ಬಂದರೆ ನೀರು ನಿಂತು ರಸ್ತೆಯಲ್ಲಿ ಹೋಗುವುದು ಕಷ್ಟವಾಗುತ್ತಿದೆ. ಶ್ರೀನಿಧಿ ಬಡಾವಣೆಯ ರಸ್ತೆಗಳ ಸ್ಥಿತಿಯೂ ಹೀಗೆ ಇದೆ. ಇಲ್ಲಿನ ಜನರ ಗೋಳು ಹೇಳತೀರದಾಗಿದೆ. ಕಟ್ಟೆ ಅಭಿವೃದ್ಧಿ: ಜಯನಗರದ ಗಾರನರಸಯ್ಯನಕಟ್ಟೆ ಅಭಿವೃದ್ಧಿ ಪಡಿಸಲಾಗಿದೆ. ಕೆರೆಯ ಹೂಳು ತೆಗೆದಿದ್ದು, ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಟ್ಟೆಯ ಬಳಿ ರಸ್ತೆ, ಬಯಲು ರಂಗ ಮಂದಿರ, ಆಸನಗಳ ವ್ಯವಸ್ಥೆ ಮಾಡಲಾಗಿದೆ.
