ಉದಯವಾಹಿನಿ, ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದು ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯನ್ನು ಉದ್ಘಾಟಿಸಿದರು. ಜೊತೆಗೆ ಅಂಜಿ ನದಿಯ ಮೇಲೆ ನಿರ್ಮಿಸಲಾದ ಭಾರತದ ಮೊಟ್ಟ ಮೊದಲ ಕೇಬಲ್-ಸ್ಟೇಡ್ ರೈಲು ಸೇತುವೆಯನ್ನೂ ಉದ್ಘಾಟಿಸಿದರು. ಈ ವೇಳೆ ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ, ರಾಜ್ಯಪಾಲ ಮನೋಜ್ ಸಿನ್ಹಾ ಉಪಸ್ಥಿತರಿದ್ದರು. ಚೆನಾಬ್ ಸೇತುವೆಯನ್ನು ಉದ್ಘಾಟಿಸಿದ ಬಳಿಕ ರಾಷ್ಟ್ರಧ್ವಜ ಹಿಡಿದು ಒಂದು ಸುತ್ತು ಪ್ರದಕ್ಷಿಣೆ ಹಾಕಿದರು.ಚೆನಾಬ್ ಸೇತುವೆ ಬಳಿಕ ಜಮ್ಮು ಮತ್ತು ಕಾಶ್ಮೀರದ ಕತ್ರಾ-ಶ್ರೀನಗರ (Katra To Srinagar) ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು. ಹಾಗೂ ವಿದ್ಯಾರ್ಥಿಗಳೊಂದಿಗೆ ಕೆಲ ಕಾಲ ಸಂವಾದ ಸಹ ನಡೆಸಿದರು.
ವಿವಿಧ ಅಭಿವೃದ್ಧಿ ಕಾಮಗಾರಿ ಯೋಜನೆಗಳಿಗೆ ಚಾಲನೆ ನೀಡುವ ಹಿನ್ನೆಲೆ ಜಮ್ಮು ಕಾಶ್ಮೀರಕ್ಕಿಂದು ಪ್ರಧಾನಿ ಮೋದಿ ಪ್ರವಾಸ ಕೈಗೊಂಡಿದ್ದಾರೆ. ಮಾತಾ ವೈಷ್ಣೋದೇವಿ ದೇವಾಲಯದ ನೆಲೆಯಾದ ಕತ್ರಾದಲ್ಲಿ 46,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಮೋದಿ ಚಾಲನೆ ನೀಡಲಿದ್ದಾರೆ. ಕತ್ರಾದಲ್ಲಿ 350 ಕೋಟಿ ರೂ.ಗಿಂತಲೂ ಹೆಚ್ಚು ವೆಚ್ಚದ ಶ್ರೀ ಮಾತಾ ವೈಷ್ಣೋದೇವಿ ವೈದ್ಯಕೀಯ ಸಂಸ್ಥೆಯ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
