ಉದಯವಾಹಿನಿ, ರಾಯ್ಪರ್: ಛತ್ತಿಸ್‌ಗಢದ ಸೂಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಐಇಡಿ (ಸುಧಾರಿತ ಸ್ಪೋಟಕ ಸಾಧನ) ಸ್ಫೋಟದಲ್ಲಿ ಸ್ಥಳೀಯ ಎಎಸ್ಪಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತ ಎಎಸ್‌ಪಿಯನ್ನು (ASP) ಆಕಾಶ್ ರಾವ್ ಗಿರಿಪುಂಜೆ ಎಂದು ಗುರುತಿಸಲಾಗಿದೆ. ಕೊಂಟಾ-ಎರಾಬೋರ್ ರಸ್ತೆಯ ದೋಂಡ್ರಾ ಬಳಿ ನಡೆದ ಘಟನೆಯಲ್ಲಿ ಡಿಎಸ್‌ಪಿ ಮತ್ತು ಇನ್ಸ್‌ಪೆಕ್ಟರ್ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೊಂಟಾದಲ್ಲಿ ನಕ್ಸಲರೇ ಪೊಲೀಸರನ್ನ ಟ್ರ್ಯಾಪ್ ಮಾಡಿದ್ದಾರೆ. ಮೊದಲು ಸುಳ್ಳು ಸುದ್ದಿಯೊಂದನ್ನ ಹಬ್ಬಿಸಿದ್ದಾರೆ, ಇದನ್ನ ನಂಬಿ ಪೊಲೀಸರ ತಂಡ ಹೊರಕೆ ಬರ್ತಿದ್ದಂತೆ ಐಇಡಿ ಸ್ಫೋಟಗೊಂಡಿದೆ. ಈ ವೇಳೆ ಗಿರಿಪುಂಜೆ ಜೊತೆಗೆ ಇತರ ಸಿಬ್ಬಂದಿ ಸಹ ಗಾಯಗೊಂಡಿದ್ದರು. ಎಲ್ಲರನ್ನು ಚಿಕಿತ್ಸೆಗಾಗಿ ಕೊಂಟಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿದ್ದ ಎಎಸ್ಪಿ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
