ಉದಯವಾಹಿನಿ, ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡ ಜನಾಂಗದ ಮಕ್ಕಳ ಹಣವನ್ನು ರಾಜಕಾರಣಕ್ಕೆ ಬಳಸಿಕೊಂಡವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಹಗರಣದ ಹಣದಲ್ಲಿ ಇವತ್ತು ಸಂಸದರು ಮತ್ತು ವಿಧಾನಸಭಾ ಸದಸ್ಯರಾಗಿರಬಹುದು. ಆದರೆ ಈ ನಾಡಿನ ಜನ ಎಲ್ಲವನ್ನು ನೋಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಸಂಸದ ತುಕಾರಾಮ್, ಬಳ್ಳಾರಿ ನಗರ ಶಾಸಕ ನಾರ ಭರತ್ ರೆಡ್ಡಿ, ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ್ ಮ್ತತು ಕಂಪ್ಲಿ ಶಾಸಕ ಗಣೇಶ್ ಇವರೆಲ್ಲರ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ದಾಳಿ ಆಗುತ್ತಿದೆ. ಈ ನಾಯಕರು ಬಹಳಷ್ಟು ಸಾಚಾವೆಂದು ಮಾತನಾಡುತ್ತಿದ್ದರು. ಇವರೆಲ್ಲ ಮಾಡುವುದೆಲ್ಲ ಅನಾಚಾರ; ಮನೆಮುಂದೆ ಬೃಂದಾವನ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದರು. ಬಹಳಷ್ಟು ಜನರು ಇವರನ್ನು ಸಾಚಾಗಳು; ಮಾತನಾಡುವ ರೀತಿ ನಡೆದುಕೊಳ್ಳತ್ತಾರೆ ಎಂದು ಅಂದುಕೊಂಡಿದ್ದರು ಎಂದು ಹೇಳಿದ್ದಾರೆ.
