ಉದಯವಾಹಿನಿ, ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ ʻಕಾಂತಾರ ಚಾಪ್ಟರ್ 1ʼಗೆ ಸಾಲು ಸಾಲು ವಿಘ್ನ ಎದುರಾಗುತ್ತಲೇ ಇದೆ. ಮೊದಲು ಹಾಸನದಲ್ಲಿ ನಡೆದ ಶೂಟಿಂಗ್‌ನಲ್ಲಿ ಬೆಂಕಿ ಹಾಕಿದ್ದಕ್ಕೆ ಮರಗಳಿಗೆ ಹಾನಿಯಾಗಿತ್ತು. ಇದಾದ ಬಳಿಕ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇರೂರು ಗ್ರಾಮದ ಗವಿಗುಡ್ಡ ಪ್ರದೇಶದ ಅರಣ್ಯದಲ್ಲಿ ನಡೆಯುತ್ತಿದ್ದ ಚಿತ್ರೀಕರಣಕ್ಕೆ ಸ್ಥಳಿಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇದಾದ ಬಳಿಕ ಕಾಂತಾರ ಚಿತ್ರತಂಡದ ವಿರುದ್ಧ ಅಕ್ರಮವಾಗಿ ಮರ ಕಡಿದು, ಸ್ಫೋಟಕ ಬಳಸಿ, ನಿಯಮ ಉಲ್ಲಂಘನೆ ಮಾಡಿದ ಆರೋಪ ಕೇಳಿಬಂದಿತು.
ಅಷ್ಟೇ ಅಲ್ಲ ಚಿತ್ರತಂಡದ ಕಲಾವಿದರನ್ನು ಕರೆದೊಯ್ಯುತ್ತಿದ್ದ ಬಸ್ ಕೊಲ್ಲೂರಿನಲ್ಲಿ ಅಪಘಾತವಾಗಿ, ಬಸ್ನಲ್ಲಿದ್ದ ಜ್ಯೂನಿಯರ್ ಆರ್ಟಿಸ್ಟ್ ಗಾಯಗೊಂಡಿದ್ದರು. ನಂತರ ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿ ಸಹ ಕಲಾವಿದ ಕಪಿಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು. ಆದ್ರೆ ರಾಕೇಶ್ ಅವರ ಚಿತ್ರೀಕರಣದ ಪಾತ್ರ ಮುಗಿದಿತ್ತು. ಇದಾದ ಬಳಿಕ ನಟ ರಿಷಬ್ ಶೆಟ್ಟಿ ಕೂಡ ತಮ್ಮ ಪತ್ನಿಯೊಂದಿಗೆ ರಾಕೇಶ್ ಪೂಜಾರಿ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಈ ಬೆನ್ನಲ್ಲೇ ಕೇರಳದ ಕಲಾವಿದ ವಿ.ಕೆ ವಿಜು ಹೃದಯಾಘಾತದಿಂದ ಸಾವನ್ನಪ್ಪಿರುವುದು ಚಿತ್ರತಂಡವನ್ನು ಚಿಂತೆಗೀಡಾಗುವಂತೆ ಮಾಡಿದೆ.
