ಉದಯವಾಹಿನಿ, ಬೆಂಗಳೂರು: ಎರಡು ಬಸ್, ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ನಡೆದಿದೆ. ಅಪಘಾತದಲ್ಲಿ ಬಸ್ ಗಳು ಜಖಂಗೊಂಡಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ. ಸ್ಥಳಕ್ಕೆ ಹೆಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ವಾಹನಗಳನ್ನು ತೆರವುಗೊಳಿಸುತ್ತಿದ್ದಾರೆ. ತಾತ್ಕಾಲಿಕವಾಗಿ ಎಲಿವೇಟೆಡ್ ಫ್ಲೈಓವರ್ ಬಂದ್ ಮಾಡಲಾಗಿದೆ. ಹೊಸೂರು ಕಡೆ ಹೋಗುವವರು ಫ್ಲೈಓವರ್ ಕೆಳಗಡೆ ಹೋಗಲು ಸೂಚನೆ ನೀಡಲಾಗಿದೆ.
