ಉದಯವಾಹಿನಿ, ಬೆಂಗಳೂರು: 10 ಕೋಟಿ ರೂ. ಮೌಲ್ಯದ ಮಾದಕವಸ್ತು ಸಾಗಾಟ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಸಿಸಿಬಿ ಮತ್ತು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯಿಂದ 10 ಕೋಟಿ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ. ಬಂಧಿತ ಮಹಿಳೆ ಕಳೆದ 3 ವರ್ಷದ ಹಿಂದೆ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದಳು. ಆರಂಭದಲ್ಲಿ ನವದೆಹಲಿಯಲ್ಲಿ ವಾಸವಾಗಿದ್ದಳು. ನಂತರ ತೆಲಂಗಾಣ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುವುದಾಗಿ ಎಜುಕೇಷನ್ ವೀಸಾ ಪಡೆದಿದ್ದಳು. ನಂತರ ಕಾಲೇಜಿಗೆ ದಾಖಲಾಗದೆ ಡ್ರಗ್ಸ್ ಪೆಡ್ಲಿಂಗ್‍ಗೆ ಇಳಿದಿದ್ದಳು.
ದೆಹಲಿಯಿಂದ ಬೆಂಗಳೂರಿಗೆ ಬಸ್ ಮೂಲಕ ಮಾದಕವಸ್ತು ಸಾಗಾಟ ಮಾಡಿದ್ದಳು. ಚಿಕ್ಕಜಾಲ ಠಾಣಾ ವ್ಯಾಪ್ತಿಯ ರಾಜಾನುಕುಂಟೆ ಬಳಿ ಮಾದಕ ವಸ್ತು ವ್ಯಾಪಾರ ಮಾಡುವಾಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಬಂಧಿತಳಿಂದ 5 ಕೆಜಿ 325ಗ್ರಾಂ ಎಂಡಿಎಂಎ ಹಾಗೂ ಆ್ಯಪಲ್ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಮಹಿಳೆ, ಹೊಸ ಚೂಡಿದಾರ್ ಡ್ರೆಸ್ ಪೀಸ್‍ಗಳ ಮಧ್ಯೆ ಮಾದಕವಸ್ತು ಅಡಗಿಸಿಕೊಂಡು ದೆಹಲಿಯಿಂದ ಬೆಂಗಳೂರಿಗೆ ತರುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
