ಉದಯವಾಹಿನಿ, ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಮಳೆ ಮತ್ತೆ ಬಿರುಸು ಪಡೆದಿದೆ. ಈ ಹಿನ್ನೆಲೆ ಕೊಡಗಿನ ಕುಶಾಲನಗರದ ಹಾರಂಗಿ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಾವೇರಿ ನದಿಗೆ ನೀರನ್ನು ಹೊರಬಿಡಲಾಗುತ್ತಿದೆ.
ಜಲಾಶಯದ ಎಲ್ಲಾ 4 ಕ್ರಸ್ಟ್ ಗೇಟ್‌ಗಳನ್ನು ತೆರೆದು 4,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಜಲಾಶಯ ತುಂಬಲು ಇನ್ನೂ 6 ಅಡಿಗಳು ಬಾಕಿ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಬಿರುಸು ಪಡೆಯುವ ಸಾಧ್ಯತೆ ಇರುವುದರಿಂದ ಕುಶಾಲನಗರ ಹಾಗೂ ನದಿ ದಂಡೆಯ ನಿವಾಸಿಗಳ ಸುರಕ್ಷತೆಯ ದೃಷ್ಟಿಯಿಂದ ಭರ್ತಿಗೂ ಮುನ್ನವೇ ನೀರನ್ನು ಹೊರಬಿಡಲಾಗುತ್ತಿದೆ.
ಪ್ರಸ್ತುತ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು ಇದ್ದು, ಇಂದಿನ ನೀರಿನ ಮಟ್ಟ 2,851.95 ಅಡಿಗಳು ಇದೆ. ಇಂದಿನ ನೀರಿನ ಒಳಹರಿವು 3,184 ಕ್ಯೂಸೆಕ್, ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಒಳಹರಿವು ಹೆಚ್ಚಾಗುವ ದೃಷ್ಟಿಯಿಂದ ಹಂತ ಹಂತವಾಗಿ ಜಲಾಶಯದ ನೀರನ್ನು ಕಾವೇರಿ ನದಿಗೆ ಹರಿಸಲಾಗುತ್ತಿದೆ.
