ಉದಯವಾಹಿನಿ, ನವದೆಹಲಿ: ಅಹಮದಾಬಾದ್‌ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನ ಅಪಘಾತಕ್ಕೂ ಮುನ್ನ ಪ್ಯಾರಿಸ್‌ನಿಂದ ದೆಹಲಿಗೆ ಹಾರಾಟ ನಡೆಸಿತ್ತು ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಮಾಹಿತಿ ನೀಡಿದ್ದಾರೆ.ಏರ್ ಇಂಡಿಯಾ ವಿಮಾನ ದುರಂತ ನಡೆದ 48 ಗಂಟೆ ಬಳಿಕ ಮೊದಲ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂನ್ 12ರಂದು ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗುವ ಮುನ್ನ ಇದೇ ವಿಮಾನವು ಪ್ಯಾರಿಸ್‌ನಿಂದ ದೆಹಲಿಗೆ ಹಾಗೂ ದೆಹಲಿಯಿಂದ ಅಹಮದಾಬಾದ್‌ಗೆ ಯಾವುದೇ ಸಮಸ್ಯೆಗಳಿಲ್ಲದೆ ಹಾರಾಟ ನಡೆಸಿತ್ತು ಎಂದು ತಿಳಿಸಿದ್ದಾರೆ.
ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಮಾತನಾಡಿ, ಸದ್ಯ ಬ್ಲ್ಯಾಕ್‌ಬಾಕ್ಸ್‌ನ್ನು ಡಿಕೋಡ್ ಮಾಡಲಾಗುತ್ತಿದ್ದು, ದುರಂತಕ್ಕೂ ಮುನ್ನ ವಿಮಾನದಲ್ಲಿ ಆಗಿದ್ದಾದರೂ ಏನು ಎನ್ನುವ ಮಾಹಿತಿ ತಿಳಿದುಬರಲಿದೆ. ಶುಕ್ರವಾರ ಸಂಜೆ ಬ್ಲ್ಯಾಕ್‌ಬಾಕ್ಸ್ ಪತ್ತೆಯಾಗಿದ್ದು. ಅಪಘಾತಕ್ಕೆ ನಿಖರವಾದ ಕಾರಣ ಇದರಿಂದ ತಿಳಿದುಬರಲಿದೆ. ಎಎಐಬಿ ತನ್ನ ತನಿಖೆಯನ್ನು ಪೂರ್ಣಗೊಳಿಸಿದ ಬಳಿಕ ವರದಿ ನೀಡಲಿದ್ದು, ಏನಾಗಿದೆ ಎಂಬುದು ಗೊತ್ತಾಗಲಿದೆ. ಘಟನೆ ಬಗ್ಗೆ ಬ್ರಿಟನ್, ಅಮೆರಿಕ ಸೇರಿದಂತೆ ಕೇಂದ್ರದ ಉನ್ನತ ಮಟ್ಟದ ಸಮಿತಿ ಸಹ ತನಿಖೆ ನಡೆಸುತ್ತಿದೆ ಎಂದರು.
