ಉದಯಯವಾಹಿನಿ, ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆರ್. ಅಶೋಕ್ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಈ ದುರ್ಘಟನೆಯು ಸಾರ್ವಜನಿಕ ಸುರಕ್ಷತೆ, ಗುಂಪು ನಿಯಂತ್ರಣ, ಕ್ರೀಡಾ ಹಾಗೂ ಇತರೇ ಕಾರ್ಯಕ್ರಮಗಳ ಆಯೋಜನೆಗೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಈ ದುರಂತ ಜನರಲ್ಲಿ ಆತಂಕ ಮತ್ತು ಕಳವಳ ಉಂಟುಮಾಡಿದೆ ಎಂದಿದ್ದಾರೆ.ಸತ್ಯ ಮರೆಮಾಚಲು 3 ರೀತಿಯ ತನಿಖೆ: ಘಟನೆಗೆ ಸಂಬಂಧಿಸಿದಂತೆ ಆಡಳಿತದಲ್ಲಿ ಆಗಿರುವ ಲೋಪಗಳು, ಘಟನೆ ನಂತರ ಸರ್ಕಾರದ ಕ್ರಮಗಳು ಅನೇಕ ಸಂಶಯಗಳನ್ನು ಹುಟ್ಟುಹಾಕಿದೆ. ಕಾಲ್ತುಳಿತಕ್ಕೆ ಕಾರಣರಾದ ಬಲಾಢ್ಯರನ್ನು ರಕ್ಷಿಸಲಾಗುತ್ತಿದೆ. ಸತ್ಯವನ್ನು ಮರೆಮಾಚಲು 3 ರೀತಿಯ ತನಿಖೆಗಳನ್ನು ಮಾಡಲಾಗುತ್ತಿದೆ. ಅಸಹಾಯಕ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ ಎಂದು ದೂರಿದ್ದಾರೆ.
