
ಉದಯವಾಹಿನಿ, ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಕುರಿತು ಎರಡೂ ದೇಶಗಳ ಪರಸ್ಪರ ಒಪ್ಪಿಗೆ ಬಳಿಕ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದ್ದಾರೆ.
ಜಿ7 ಶೃಂಗಸಭೆಗೆ ಭೇಟಿ ನೀಡಿದ್ದ ವೇಳೆ ಅಮೆರಿಕಗೆ ಭೇಟಿ ನೀಡುವಂತೆ ಟ್ರಂಪ್ ಮೋದಿಯನ್ನು ಆಹ್ವಾನಿಸಿದ್ದರು. ಆದರೆ ಮೊದಲೇ ವೇಳಾಪಟ್ಟಿ ನಿಗದಿಯಾಗಿದ್ದ ಹಿನ್ನೆಲೆ ಅಮೆರಿಕಗೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಮೋದಿ ತಿಳಿಸಿದ್ದಾರೆ. ಬಳಿಕ ದೂರವಾಣಿ ಮೂಲಕ ಟ್ರಂಪ್‌ಗೆ ಕರೆ ಮಾಡಿದ ಮೋದಿ, ಆಪರೇಷನ್ ಸಿಂಧೂರದ ಬಳಿಕ ಭಾರತ ಹಾಗೂ ಪಾಕ್ ನಡುವೆ ಕದನ ವಿರಾಮ ಘೋಷಣೆ ಕುರಿತು ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಪಾಕ್ ಮನವಿ ಬಳಿಕ ಭಾರತ ಪರಸ್ಪರ ಹೊಂದಾಣಿಕೆಯೊಂದಿಗೆ ಕದನ ವಿರಾಮ ಘೋಷಿಸಿದೆ. ಇದರಲ್ಲಿ ಯಾವ ದೇಶದ ಮಧ್ಯಸ್ಥಿಕೆಯೂ ಇರಲಿಲ್ಲ. ಯಾವುದೇ ವ್ಯಾಪಾರ ಒಪ್ಪಂದದ ಬಗ್ಗೆಯೂ ಚರ್ಚಿಸಿಲ್ಲ. ಭಾರತವು ಇನ್ನುಮುಂದೆ ಭಯೋತ್ಪಾದನೆಯನ್ನು ಪ್ರಾಕ್ಸಿ ಯುದ್ಧವಾಗಿ ನೋಡುವುದಿಲ್ಲ, ಬದಲಿಗೆ ಯುದ್ಧವಾಗಿ ನೋಡುತ್ತದೆ. ಭಾರತದ ಆಪರೇಷನ್ ಸಿಂಧೂರ ಇನ್ನೂ ಮುಂದುವರಿಯುತ್ತದೆ ಎಂದು ಮೋದಿ ಹೇಳಿದರು.
