ಉದಯವಾಹಿನಿ, ವಾಷಿಂಗ್ಟನ್: ಜೂನ್ 19ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಬೇಕಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರ ಯಾನ ಮತ್ತೆ ವಿಳಂಭವಾಗಿದೆ. ಜೂನ್ 22ರಂದು ಸಂಭಾವ್ಯ ಉಡಾವಣಾ ದಿನಾಂಕ ಪ್ರಕಟಿಸುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.
ಫಾಲ್ಕನ್ 9 ಉಡಾವಣಾ ವಾಹನದಲ್ಲಿ ತಾಂತ್ರಿಕ ಸಮಸ್ಯೆ ಹಿನ್ನೆಲೆ ಬಾಹ್ಯಾಕಾಶ ಯಾನ ಮುಂದೂಡಿಕೆಯಾಗಿದೆ. ಕಳೆದ ವಾರ ಉಡಾವಣಾ ಪ್ಯಾಡ್‌ನಲ್ಲಿ ಏಳು ಸೆಕೆಂಡುಗಳ ಬಿಸಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯ ಸಮಯದಲ್ಲಿ ಪ್ರೊಪಲ್ಷನ್ ಬೇಯಲ್ಲಿ LOX ಸೋರಿಕೆ ಪತ್ತೆಯಾಗಿತ್ತು. ಈ ಕುರಿತು ಇಸ್ರೋ ತಂಡ ಆ್ಯಕ್ಸಿಯಂ-4 ಮತ್ತು ಸ್ಪೇಸ್ ಎಕ್ಸ್‌ನ ತಜ್ಞರೊಂದಿಗೆ ಚರ್ಚೆ ನಡೆಸಿ, ಸೋರಿಕೆ ಸರಿಪಡಿಸಲು ಮತ್ತು ಉಡಾವಣೆಗೆ ತೆರವುಗೊಳಿಸುವ ಮೊದಲು ಅಗತ್ಯ ಮೌಲ್ಯೀಕರಣ ಪರೀಕ್ಷೆ ನಡೆಸಲು ನಿರ್ಧರಿಸಿತ್ತು. ಈ ಎಲ್ಲ ಪ್ರಕ್ರಿಯೆ ಮುಕ್ತಾಯದ ಬಳಿಕ ಜೂನ್ 19ರಂದು ಮಿಷನ್ ಶುರು ಮಾಡಲು ದಿನಾಂಕ ನಿಗದಿಪಡಿಸಲಾಗಿತ್ತು. ಸದ್ಯ ತಾಂತ್ರಿಕ ದೋಷ ಸರಿಪಡಿಸುವ ಪ್ರಕ್ರಿಯೆ ಈವರೆಗೆ ಪೂರ್ಣಗೊಳ್ಳದ ಕಾರಣ ಜೂನ್ 22ಕ್ಕೆ ಮುನ್ನ ʻಆ್ಯಕ್ಸಿಯಂ-4ʼ ಆರಂಭಿಸುವುದು ಅಸಾಧ್ಯವಾಗಿದೆ.
