ಉದಯವಾಹಿನಿ, ನವದೆಹಲಿ: ಇರಾನ್‌ನಲ್ಲಿ (Iran) ಸಿಲುಕಿದ್ದ ಕಾಶ್ಮೀರದ ವಿದ್ಯಾರ್ಥಿಗಳು ದೆಹಲಿಯಲ್ಲಿ ಇಳಿದ ಬೆನ್ನಲ್ಲೇ ಜಮ್ಮು ಕಾಶ್ಮೀರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಇರಾನ್‌ನ ಉರ್ಮಿಯಾ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ 110 ವಿದ್ಯಾರ್ಥಿಗಳು ಆಪರೇಷನ್ ಸಿಂಧು ಕಾರ್ಯಾಚರಣೆಯ ಮೂಲಕ ಗುರುವಾರ ಬೆಳಿಗ್ಗೆ ದೆಹಲಿಗೆ ಬಂದಿಳಿದರು. ದೆಹಲಿಗೆ ಆಗಮಿಸಿದ ವಿದ್ಯಾರ್ಥಿಗಳನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಆತ್ಮೀಯವಾಗಿ ಬರಮಾಡಿಕೊಂಡರು. ಸಂಘರ್ಷ ಪೀಡಿತ ಇರಾನ್‌ನಿಂದ ಸುರಕ್ಷಿತವಾಗಿ ಭಾರತಕ್ಕೆ ಕರೆ ತಂದಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ವಿದ್ಯಾರ್ಥಿಗಳು ಧನ್ಯವಾದ ಅರ್ಪಿಸಿದರು.
ಈಗ ಈ ವಿದ್ಯಾರ್ಥಿಗಳು ಕಳಪೆ ಬಸ್ಸುಗಳನ್ನು ನೀಡಿದ್ದಕ್ಕೆ ಜಮ್ಮು ಕಾಶ್ಮೀರ ಸರ್ಕಾರವನ್ನು ದೂರಿದ್ದಾರೆ. ನಾವು ಬಹಳ ದೂರದಿಂದ ಬಂದಿದ್ದೇವೆ. ಆದರೆ ಸರ್ಕಾರ ಡಿಲಕ್ಸ್ ಬಸ್ಸು ನೀಡದೇ ಕಳಪೆ ಬಸ್ಸು ನೀಡಿದೆ. ವಿಮಾನ ವ್ಯವಸ್ಥೆಯನ್ನು ಸಹ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
