ಉದಯವಾಹಿನಿ, ನವದೆಹಲಿ: ಇರಾನ್ ಹಾಗೂ ಇಸ್ರೇಲ್ ಸಂಘರ್ಷದಿಂದ (Israel-Iran Conflict) ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವ ಕೆಲಸ ಆರಂಭಗೊಂಡಿದೆ. ಇಂದು (ಜೂ.19) ಮುಂಜಾನೆ ಇರಾನ್‍ನಿಂದ ಹೊರಟಿದ್ದ 110 ವಿದ್ಯಾರ್ಥಿಗಳು ದೆಹಲಿ ತಲುಪಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ್ದವರನ್ನು ಕರೆತರಲು ಕೇಂದ್ರ ಸರ್ಕಾರ ಆಪರೇಷನ್ ಸಿಂಧು (Operation Sindhu) ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದೆ. ವಿದ್ಯಾರ್ಥಿಗಳು ಇರಾನ್‍ನಿಂದ ಅರ್ಮೇನಿಯಾದ ಮೂಲಕ ಭಾರತಕ್ಕೆ ಹೊರಟಿದ್ದರು. ಉತ್ತರ ಭಾರತದ ಹಲವು ರಾಜ್ಯಗಳ ವಿದ್ಯಾರ್ಥಿಗಳು ದೆಹಲಿಗೆ ಬಂದಿದ್ದಾರೆ. ಆಪರೇಷನ್ ಸಿಂಧು ಭಾಗವಾಗಿ ಎರಡನೇ ವಿಮಾನ ಸಹ ಹೊರಟಿದ್ದು, ಅದರಲ್ಲಿ ಐದು ಮಂದಿ ಕನ್ನಡಿಗರಿದ್ದಾರೆ. ಅದರಲ್ಲಿರುವ ಕನ್ನಡಿಗರು ಬೆಳಿಗ್ಗೆ 9 ಗಂಟೆಗೆ ದೆಹಲಿ ತಲುಪಲಿದ್ದಾರೆ.ಸಂಘರ್ಷದಿಂದ ಇಸ್ರೇಲ್‍ನಲ್ಲಿ ಸಿಲುಕಿದ್ದ 18 ಕನ್ನಡಿಗರು ಸಹ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಗಳೂರಿಗೆ ತಲುಪುವ ಸಾಧ್ಯತೆ ಇದೆ.
ಬಿ-ಪ್ಯಾಕ್ ಸದಸ್ಯರ ಕನ್ನಡಿಗರ ತಂಡ ಅಧ್ಯಯನ ಪ್ರವಾಸಕ್ಕೆ ಹೋಗಿತ್ತು. ಇಸ್ರೇಲ್‍ನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಹಿನ್ನೆಲೆ ಅಲ್ಲೇ ಉಳಿದಿದ್ದರು. ಬುಧವಾರ (ಜೂ.18) ರಾತ್ರಿ ಕುವೈತ್ ತಲುಪಿದ್ದರು. ಅಲ್ಲಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕನ್ನಡಿಗರ ತಂಡ ಬರಲಿದೆ ಎಂದು ವರದಿಯಾಗಿದೆ.
