ಉದಯವಾಹಿನಿ, ಬೆಂಗಳೂರು: ಮಹಿಳೆಯೊಬ್ಬಳು ತಾನೇ ಸಾಕಿದ್ದ ನಾಯಿಗೆ ಚಿತ್ರಹಿಂಸೆ ಕೊಟ್ಟು, ಬಳಿಕ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಮಹದೇವಪುರ ವ್ಯಾಪ್ತಿಯ ಖಾಸಗಿ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ. ಆರೋಪಿ ಮಹಿಳೆಯನ್ನು ತ್ರಿಪರ್ಣ ಪಾಯ್ಕ್ ಎಂದು ಗುರುತಿಸಲಾಗಿದೆ. ತಾನೇ ಸಾಕಿ, ಸಲುಹಿದ್ದ ನಾಯಿಗೆ ಚಿತ್ರಹಿಂಸೆ ಕೊಟ್ಟು, ಬರ್ಬರವಾಗಿ ಕೊಲೆ ಮಾಡಿ, ವಿಕೃತಿ ಮೆರೆದಿದ್ದಾಳೆ. ಮೂಕ ಶ್ವಾನ ದಾರುಣವಾಗಿ ಪ್ರಾಣಬಿಟ್ಟಿದ್ದು, ಬಳಿಕ ಸತ್ತ ನಾಯಿಯೊಂದಿಗೆ ಎರಡು ದಿನ ಅಲ್ಲೇ ವಾಸವಾಗಿದ್ದಳು. ಎರಡು ಮೂರು ದಿನದ ಬಳಿಕ ಅಪಾರ್ಟ್ಮೆಂಟ್‌ನ ಫ್ಲ್ಯಾಟ್‌ನಿಂದ ದುರ್ವಾಸನೆ ಬಂದಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಯಿಯನ್ನು ಮಹಿಳೆ ಸಾಯಿಸಿರುವುದು ಬೆಳಕಿಗೆ ಬಂದಿದ್ದು, ಆಕೆ ಹತ್ಯೆಗೈದ ರೀತಿಯನ್ನು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಕೂಡಲೇ ಪೊಲೀಸರು ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪಾಲಿಕೆ ಸಿಬ್ಬಂದಿ ಬಂದು ನಾಯಿಯ ಮೃತದೇಹವನ್ನು ತೆರವುಗೊಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ, ನಾಯಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿರೋದು ತಿಳಿದು ಬಂದಿದೆ.
