ಉದಯವಾಹಿನಿ, ಹಾಸನ: ಎದೆನೋವು ಕಾಣಿಸಿಕೊಂಡ ಹಿನ್ನೆಲೆ ತಾನೇ ಆಟೋ ಚಲಾಯಿಸಿಕೊಂಡು ಆಸ್ಪತ್ರೆಗೆ ಸೇರಿದ್ದ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.ಗೋವಿಂದ (37) ಹೃದಯಾಘಾತದಿಂದ ಸಾವನ್ನಪ್ಪಿದ ಆಟೋ ಚಾಲಕ. ಹಾಸನದ ಸಿದ್ದೇಶ್ವರ ನಗರದಲ್ಲಿ ಘಟನೆ ನಡೆದಿದೆ.ಏಳು ಗಂಟೆ ಸಮಯದಲ್ಲಿ ಆಟೋ ಚಲಾಯಿಸುವಾಗ ಗೋವಿಂದ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಆಟೋ ಚಲಾಯಿಸಿಕೊಂಡು ಗೋವಿಂದ ಜಿಲ್ಲಾಸ್ಪತ್ರೆಗೆ ತೆರಳಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಗೋವಿಂದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಒಂದು ತಿಂಗಳ ಅಂತರದಲ್ಲಿ ಹಾಸನ ಜಿಲ್ಲೆಯಲ್ಲಿ ಹದಿನೇಳು ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
