ಉದಯವಾಹಿನಿ, ಇಸ್ಲಾಮಾಬಾದ್: ದಿಢೀರ್ ಪ್ರವಾಹದಿಂದಾಗಿ ಪ್ರವಾಸಕ್ಕೆಂದು ಹೋಗಿದ್ದ 18 ಜನರ ಪೈಕಿ 9 ಜನರು ಸಾವನ್ನಪ್ಪಿರುವ ಘಟನೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾತ್ ನದಿಯಲ್ಲಿ ನಡೆದಿದೆ.18 ಸದಸ್ಯರನ್ನೊಳಗೊಂಡ ಕುಟುಂಬವು ಪ್ರವಾಸಕ್ಕೆಂದು ಸ್ವಾತ್ ನದಿಗೆ ತೆರಳಿದ್ದರು. ನದಿಯ ದಡದಲ್ಲಿ ಊಟ ಮಾಡುತ್ತಾ, ಆನಂದಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಘಟನೆ ಬಗ್ಗೆ ಕುಟುಂಬದ ಸದಸ್ಯರೊಬ್ಬರು ಮಾತನಾಡಿ, ಮಕ್ಕಳು ತೀರಕ್ಕೆ ತೆರಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ನದಿಯಲ್ಲಿ ತುಂಬಾ ಕಡಿಮೆ ನೀರಿತ್ತು. ಇದ್ದಕ್ಕಿದ್ದಂತೆ ಪ್ರವಾಹದ ನೀರು ಬಂದು ಮಕ್ಕಳು ಕೊಚ್ಚಿಕೊಂಡು ಹೋದರು. ಯಾವುದೋ ಆಣೆಕಟ್ಟು ಒಡೆದು ಹೋದ ರೀತಿಯಲ್ಲಿ ನೀರು ಬಂದಿತ್ತು. ಆದರೆ ನಾವು ಎರಡು ಗಂಟೆಗಳಿಂತ ಹೆಚ್ಚು ಕಾಯುತ್ತಿದ್ದೆವು, ಯಾರು ಸಹಾಯಕ್ಕೆ ಬರಲಿಲ್ಲ ಎಂದು ತಿಳಿಸಿದ್ದಾರೆ.ಈ ಕುರಿತು ಅಧಿಕಾರಿಗಳು ಮಾತನಾಡಿ, ಜನ ಸಿಲುಕಿರುವ ಕುರಿತು ಬೆಳಿಗ್ಗೆ 9 ಗಂಟೆಗೆ ಮಾಹಿತಿ ಬಂದಿದೆ. ಪ್ರವಾಸಕ್ಕೆಂದು ತೆರಳಿದ್ದ ಜನರಿಗೆ ನೀರು ಬಿಡುಗಡೆಯಾಗುವ ಮಾಹಿತಿ ಇರಲಿಲ್ಲ. ಹೀಗಾಗಿ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ತಲುಪುವ ವೇಳೆಗೆ ನಾಲ್ಕು ಜನರು ಕೊಚ್ಚಿ ಹೋಗಿದ್ದರು. ಅವಘಡದ ವಿಡಿಯೋ ವೈರಲ್ ಆಗಿದ್ದು, ದಡದಲ್ಲಿ ನಿಂತ ಜನರ ಸುತ್ತಲೂ ನೀರು ಆವರಿಸಿತ್ತು. ಆ ಜನರಿಗೆ ಯಾವ ಕಡೆಗೂ ಹೋಗುವ ಅವಕಾಶವೇ ಇರಲಿಲ್ಲ ಎಂದು ಗೊತ್ತಾಗುತ್ತದೆ.
