ಉದಯವಾಹಿನಿ, ಹುಬ್ಬಳ್ಳಿ : ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಗೆ ಮಹಾಪೌರರಾಗಿ 19ನೇ ವಾರ್ಡ್ ಸದಸ್ಯರಾದ ಜ್ಯೋತಿ ಪಾಟೀಲ ಅವರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನ ಸುವರ್ಣಾ ಕಲಕುಂಟ್ಲಾ ವಿರುದ್ಧ ಬಿಜೆಪಿಯ ಜ್ಯೋತಿ ಪಾಟೀಲ್ ಅವರು ಅತಿ ಹೆಚ್ಚು (47) ಮತಗಳನ್ನು ಪಡೆಯುವ ಮೂಲಕ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾದರು. ಇನ್ನು ಪಾಲಿಕೆಯ 49ನೇ ವಾರ್ಡ್ ಸದಸ್ಯೆಯರಾದ ಸಂತೋಷ ಚವ್ಹಾಣ ಅವರು ಅತಿ ಹೆಚ್ಚು (47) ಮತಗಳನ್ನು ಪಡೆದು ಉಪಮೇಯರ್ ಆಗಿದ್ದಾರೆ. ಈ ಮೂಲಕ ಬಿಜೆಪಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಉಪಮಹಾಪೌರ ಸ್ಥಾನಕ್ಕೆ ಮಹಾನಗರ ಪಾಲಿಕೆಯ 14ನೇ ವಾರ್ಡ್ ಸದಸ್ಯರಾದ ಶಂಭುಗೌಡ ರುದ್ರಗೌಡ ಸಾಲಮನಿ ಅವರು ಸ್ಪರ್ಧೆ ಮಾಡಿದ್ದರು. ಮಹಾಪೌರ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಮಹಾನಗರ ಪಾಲಿಕೆಯ 59ನೇ ವಾರ್ಡ್ ಸದಸ್ಯರಾದ ಸುವರ್ಣ ಕಲಕುಂಟ್ಲ ಹಾಗೂ 76 ನೇ ವಾರ್ಡ್ ಸದಸ್ಯರಾದ ವಹೀದಾ ಖಾನಂ ಅಲ್ಲಾಭಕ್ಷ ಕಿತ್ತೂರು ಅವರು ಸ್ಪರ್ಧಿಸಿದ್ದರು. ಇನ್ನು ಮಹಾಪೌರ ಮತ್ತು ಉಪ ಮಹಾಪೌರ ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಚಲಾಯಿಸಿದರು. ಬಿಜೆಪಿಗೆ ಮಹಾಪೌರ ಹಾಗೂ ಉಪಮಹಾಪೌರ ಒಲಿದಿದೆ.
