ಉದಯವಾಹಿನಿ, ಶಿವಮೊಗ್ಗ: ಯುವಕರಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾಗುತ್ತಿದ್ದು, ಶಿವಮೊಗ್ಗದಲ್ಲೂ ಎರಡೇ ದಿನದಲ್ಲಿ ನಾಲ್ವರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. 21 ವರ್ಷದ ಯುವಕ, 23 ವರ್ಷದ ವಿವಾಹಿತೆ ಮತ್ತು ಓರ್ವ ವೈದ್ಯ, ಹಾಗೂ 52 ವರ್ಷದ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಭಾನುವಾರ ಡಿವಿಎಸ್ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಶ್ರೀನಿಧಿ (21) ಹೃದಯಾಘಾತದಿಂದ ಸಾವನ್ನಪ್ಪಿದ್ದ. ಬಸವಗಂಗೂರಿನ ನಿವಾಸಿ ಶ್ರೀನಿಧಿಗೆ ಮುಂಜಾನೆಯೇ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಾಣಿಸಿಕೊಂಡಿತ್ತು. ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ. ಹೃದಯಾಘಾತ ಹಾಗೂ ನ್ಯೂಮೋನಿಯಾದಿಂದ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮೂವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹೊಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಸಂದೀಪ್ (40) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ ಬಾಣಂತಿ‌ ಹರ್ಷಿತಾ (23) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹರ್ಷಿತಾ ಹಾಸನ ಜಿಲ್ಲೆಯ ಯುವಕನನ್ನು ಮದುವೆಯಾಗಿದ್ದರು. ಎ.5 ರಂದು ಎರಡನೇ ಹೆರಿಗೆಗೆ ಆಯನೂರು ಬಳಿಯ ದ್ಯಾವಿನಕೆರೆಯಲ್ಲಿರುವ ತವರು ಮನೆಗೆ ಬಂದಿದ್ದರು. ಮೇ 24 ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಜನ್ಮ ನೀಡಿ 34 ದಿನಗಳ ಅಂತರದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನು ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್‌ಗೆ ದಾಖಲಿಸಲು ಕರೆದೊಯ್ಯುವಾಗ ಮಾರ್ಗ ಮಧ್ಯೆದಲ್ಲಿ ಸಾವಿಗೀಡಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!