ಉದಯವಾಹಿನಿ, ಚಿತ್ರದುರ್ಗ: ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಭದ್ರಾ ಬಲದಂಡೆಯಿಂದ ಜಿಲ್ಲೆಗೆ ನೀರು ಪೂರೈಸುವುದಕ್ಕೆ ದಾವಣಗೆರೆ ಜಿಲ್ಲೆಯವರು ಅಡ್ಡಿಪಡಿಸುತ್ತಿರುವುದು ಖಂಡನೀಯ. ಕುಡಿಯುವ ನೀರು, ತಿನ್ನುವ ಅನ್ನಕ್ಕೆ ಅಡ್ಡಿಪಡಿಸುವುದು ಅಕ್ಷಮ್ಯ ಅಪರಾಧ ಎಂದು ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಆದೇಶ ನೀಡಿದೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
‘ಭಾರತೀಯ ಸಂವಿಧಾನ ಕುಡಿಯುವ ನೀರು, ಅನ್ನಕ್ಕೆ ಬೇಲಿ ಹಾಕಿಲ್ಲ, ನೀರು ಯಾರ ಸ್ವತ್ತೂ ಅಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈಗಾಗಲೇ ಪೂರ್ಣಗೊಂಡಿದ್ದು, ಮುಖ್ಯಮಂತ್ರಿಯವರು ಕೂಡಲೇ ಇದನ್ನು ಉದ್ಘಾಟಿಸಬೇಕು. ನೂರಾರು ಕೋಟಿ ಖರ್ಚು ಮಾಡಿ ಪೂರ್ಣಗೊಳಿಸಿರುವ ಯೋಜನೆಗೆ ಅಡ್ಡಿಪಡಿಸುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಹೊಸದುರ್ಗ ತಾಲ್ಲೂಕಿನ 346 ಜನವಸತಿ ಪ್ರದೇಶ, ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ 117 ಜನವಸತಿ ಪ್ರದೇಶಕ್ಕೆ ಕುಡಿಯುವ ನೀರು ಕಲ್ಪಿಸಲು ಅಪಾರ ಹಣ ವೆಚ್ಚ ಮಾಡಲಾಗಿದೆ. ಬಿಜೆಪಿ ಸರ್ಕಾರವೇ ಈ ಯೋಜನೆಗೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದೆ. ದಾವಣಗೆರೆ- ಚಿತ್ರದುರ್ಗ ಜಿಲ್ಲೆಗಳು ಹಿಂದೂಸ್ತಾನ ಹಾಗೂ ಪಾಕಿಸ್ತಾನ ಅಲ್ಲ. ಕೂಡಲೇ ದಾವಣಗೆರೆ ಜಿಲ್ಲೆಯವರು ಹೋರಾಟ ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.
‘ಮಹಾರಾಷ್ಟ್ರದ ಜತ್ ತಾಲ್ಲೂಕಿನ ಜನರು ಕೃಷ್ಣಾ ನದಿ ನೀರಿಗಾಗಿ ಹೋರಾಟ ಮಾಡುತ್ತಿದ್ದರು. ನೀರಿಗಾಗಿ ಅವರು ಮಹಾರಾಷ್ಟ್ರ ಬಿಟ್ಟು ಕರ್ನಾಟಕಕ್ಕೆ ಸೇರಲು ಸಿದ್ಧರಿದ್ದರು. ಮಾನವೀಯತೆ ದೃಷ್ಟಿಯಿಂದ ನಾವು ಆ ತಾಲ್ಲೂಕಿನ ಜನರಿಗೆ ಕುಡಿಯುವ ನೀರು ನೀಡಿದ್ದೇವೆ. ಬೇಸಿಗೆಯಲ್ಲಿ ಕೃಷ್ಣಾ, ಭೀಮಾ ನದಿ ಒಣಗಿದಾಗ ನಮಗೆ ಮಹಾರಾಷ್ಟ್ರದವರು ಕೊಯ್ತಾ ಜಲಾಶಯದಿಂದ ಕುಡಿಯುವ ನೀರು ಕೊಡುತ್ತಾರೆ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷವಾದರೂ ರಾಜಕಾರಣ ಮಾಡಬಾರದು’ ಎಂದರು.
