ಉದಯವಾಹಿನಿ, 2026ರ ಹಾಲಿವುಡ್ ವಾಕ್ ಆಫ್ ಫೇಮ್‌ ಪಟ್ಟಿಯಲ್ಲಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ಸ್ಥಾನಗಳಿಸಿದ್ದು, ಈ ಮೂಲಕ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಮೋಷನ್ ಪಿಕ್ಚರ್ಸ್ ವಿಭಾಗದಲ್ಲಿ ನಟಿ ದೀಪಿಕಾ ಪಡುಕೋಣೆ 2026ರ ಹಾಲಿವುಡ್ ವಾಕ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಕುರಿತು ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿದ್ದು, ಡೆಮಿ ಮೂರ್, ರಾಚೆಲ್ ಮ್ಯಾಕ್ ಆಡಮ್ಸ್, ಎಮಿಲಿ ಬ್ಲಂಟ್, ಟಿಮೋಥೆ ಚಲಮೆಟ್, ರಾಮಿ ಮಲೆಕ್ ಮತ್ತು ಸ್ಟಾನ್ಲಿ ಟುಸಿಯಂತಹ ಅಂತಾರಾಷ್ಟ್ರೀಯ ತಾರೆಯರೊಂದಿಗೆ ದೀಪಿಕಾ ಪಡುಕೋಣೆಯವರ ಹೆಸರು ಕಾಣಿಸಿಕೊಂಡಿದೆ. ಬಣ್ಣದ ಜಗತ್ತಿಗೆ ಅನನ್ಯ ಕೊಡುಗೆಗಳನ್ನು ನೀಡಿದ ಕೆಲವರನ್ನು ಆರಿಸಿ, ಅವರನ್ನು ಗೌರವಿಸುವ ಸಲುವಾಗಿ ಈ ಹಾಲಿವುಡ್‌ ವಾಕ್ ಆಫ್ ಫೇಮ್ ನೀಡಲಾಗುತ್ತದೆ. ಜೂ.20ರಂದು ಹಾಲಿವುಡ್ ಚೇಂಬರ್ ನಡೆಸಿದ ಸಭೆಯಲ್ಲಿ 35 ಹೆಸರುಗಳನ್ನು ಆಯ್ಕೆ ಮಾಡಿ, ಮಂಡಳಿ ಒಪ್ಪಿಗೆ ಸೂಚಿಸಿದ ನಂತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಮೂಲಕ ದೀಪಿಕಾ ಇತಿಹಾಸವೊಂದನ್ನು ನಿರ್ಮಿಸಿದ್ದು, ಹಾಲಿವುಡ್‌ ವಾಕ್‌ ಆಫ್ ಫೇಮ್ ಪಟ್ಟಿಗೆ ಸೇರಿದ ಮೊದಲ ಭಾರತೀಯ ನಟಿಯಾಗಿ ಮಿಂಚಿದ್ದಾರೆ.

ಬಹುಕಾಲದಿಂದಲೂ ನಟಿ ದೀಪಿಕಾ ಸಿನಿಮಾ ರಂಗದಲ್ಲಿ ತಮ್ಮದೇ ಆದ ಟ್ರೆಂಡ್‌ ಸೆಟ್‌ ಮಾಡಿದವರು. ಜೊತೆಗೆ 2018ರಲ್ಲಿ ಟೈಮ್100 ನಿಯತಕಾಲಿಕೆಯಲ್ಲಿ ವಿಶ್ವದ 100 ಪ್ರಭಾವಶಾಲಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಕತಾರ್‌ನಲ್ಲಿ ನಡೆದ 2022ರ FIFA ವಿಶ್ವಕಪ್ ಫೈನಲ್‌ನಲ್ಲಿ ಟ್ರೋಫಿಯನ್ನು ಅನಾವರಣಗೊಳಿಸಿದ್ದು ಅವರ ಜೀವನದ ಇನ್ನೊಂದು ಪ್ರಮುಖ ಮೈಲಿಗಲ್ಲು.

Leave a Reply

Your email address will not be published. Required fields are marked *

error: Content is protected !!