ಉದಯವಾಹಿನಿ, ಪಡುಬಿದ್ರಿ: ಪಡುಬಿದ್ರಿಯಿಂದ ಬೀಚ್ ಸಂಪರ್ಕಿಸುವ ರಸ್ತೆಯು ತೀರಾ ಹದಗೆಟ್ಟಿರುವ ನಡುವೆಯೇ ಈ ರಸ್ತೆಯಲ್ಲಿರುವ 50 ವರ್ಷಗಳ ಹಿಂದಿನ ಸೇತುವೆಯೊಂದು ಶಿಥಿಲಗೊಂಡು, ಕುಸಿತದ ಭೀತಿಯಲ್ಲಿದೆ.ಈ ಸೇತುವೆಯ ಮೇಲ್ಬಾಗದಲ್ಲಿ ಕಾಂಕ್ರಿಟ್ ಕಿತ್ತು ಹೋಗಿದೆ. ಸೇತುವೆಯ ಬುಡ ಅಪಾಯದ ಸ್ಥಿತಿಯಲ್ಲಿದೆ.
ಇದರಿಂದ ಸೇತುವೆಯಲ್ಲಿನ ಸಂಚಾರವೇ ಅಪಾಯದ ಆಹ್ವಾನಿಸುವಂತಾಗಿದೆ. ಲಘು ವಾಹನ ಹಾಗೂ ಘನ ವಾಹನಗಳು ಸಂಚಾರ ಮಾಡಲು ಅಸಾಧ್ಯವಾಗಿದೆ.
ಶನಿವಾರ ಮತ್ತು ಭಾನುವಾರ ಬೀಚ್‌ಗೆ ಬರುವವರ ಸಂಖ್ಯೆ ಅಧಿಕವಾಗಿದ್ದು, ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇದರಿಂದ ಈ ಸೇತುವೆಯ ಬಳಿ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ವಾಹನ ದಟ್ಟಣೆ ಹೆಚ್ಚಾದರೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕಾದ ಅನಿವಾರ್ಯತೆ ಇದೆ.
ಈ ಸೇತುವೆಯು ನಡಿಪಟ್ಟ, ಕಾಡಿಪಟ್ಟ ರಸ್ತೆಗೆ, ಬ್ರಹ್ಮಸ್ಥಾನ ಅಲ್ಲದೆ ಇಲ್ಲಿನ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಬ್ಲೂಫ್ಲ್ಯಾಗ್ ಬೀಚ್ ಹಾಗೂ ಮುಖ್ಯಬೀಚ್‌ಗೆ ಮುಖ್ಯ ಸಂಪರ್ಕ ಸೇತುವೆಯಾಗಿದೆ. ಶಾಲಾ ವಾಹನಗಳು, ಸಾರ್ವಜನಿಕರು ಇದರಲ್ಲಿ ದಿನನಿತ್ಯ ಸಂಚರಿಸುತಿದ್ದಾರೆ.
ಸೇತುವೆ ಕುಸಿದಲ್ಲಿ ಇಲ್ಲಿಗೆ ಬರುವವರು ಸುತ್ತು ಬಳಸಿ ಎರ್ಮಾಳು ಮೂಲಕ ಅಥವಾ ಬೀಡು ಬಳಿಯ ಕಿರಿದಾದ ರಸ್ತೆಯಲ್ಲಿ ಬೀಚ್‌ಗೆ ಬರಬೇಕಾಗುತ್ತದೆ. ಆದ್ದರಿಂದ ಕೂಡಲೇ ಈ ಸೇತುವೆ ದುರಸ್ತಿಗೊಳಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ಸೇತುವೆ ಅಗಲಗೊಳಿಸಬೇಕು: ಈಗಿರುವ ಸೇತುವೆ ಅಗಲ ಕಿರಿದಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಮೂಲಸೌಕರ್ಯ ಬಂದರು ಮತ್ತು ಮೀನುಗಾರಿಕಾ ಉಪವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರ ಬರೆದಿದ್ದಾರೆ. ಸೇತುವೆ ಬುಡದಲ್ಲಿ ಕಾಂಕ್ರಿಟ್ ಪಿಲ್ಲರ್‌ಗಳು ನದಿಯಲ್ಲಿ ಹರಿಯುವ ನೀರಿನ ರಭಸಕ್ಕೆ ಹಾನಿಗೊಂಡು, ಅಪಾಯದ ಸ್ಥಿತಿಯಲ್ಲಿರುವ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!