ಉದಯವಾಹಿನಿ,ಕೋಲಾರ: ಹೊಸದಾಗಿ ರಚನೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ಅಗತ್ಯ ಪೂರ್ವ ಸಿದ್ದತೆ ಮಾಡಿಕೊಳ್ಳಲು ಸೂಚಿಸಿರುವ ರಾಜ್ಯ ಚುನಾವಣಾ ಆಯೋಗ ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆ ಸಿದ್ದತೆಗೂ ಕೋಲಾರದ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಈ ಸಂಬಂಧ ಕೋಲಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಆಯೋಗ ಹೊಸದಾಗಿ ರಚನೆಯಾಗಿರುವ ಜಿಲ್ಲೆಯ ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿಗೆ ಈಗಾಗಲೇ ರಾಜ್ಯ ಸರ್ಕಾರ ವಾರ್ಡುವಾರು ಮೀಸಲಾತಿ ನಿಗಧಿಗೊಳಿಸಿ ಅಧಿಸೂಚನೆಯನ್ನು ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಹೊರಡಿಸಿರುವ ಹಿನ್ನಲೆಯಲ್ಲಿ ಚುನಾವಣೆಗೆ ಆಯೋಗ ಮುಂದಾಗಿದೆ.
ಈ ಸಂಬಂಧ ಸಾರ್ವತ್ರಿಕ ಚುನಾವಣೆ ನಡೆಸಲು ಆಯೋಗ ಉದ್ದೇಶಿದ್ದು, ಚುನಾವಣೆಗಾಗಿ ಅಗತ್ಯ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ಅದರಂತೆ ಮತದಾರರ ಪಟ್ಟಿ ತಯಾರಿಕೆಗೆ ಆಯೋಗದಿಂದ ಪ್ರತ್ಯೇಕವಾಗಿ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದೆ. ಉಳಿದಂತೆ ಮತದಾನ ಕೇಂದ್ರಗಳ ಭೌತಿಕ ಪರಿಶೀಲನೆ ನಡೆಸಿ ಕೇಂದ್ರಗಳ ಪಟ್ಟಿಯನ್ನು ಅಂತಿಮಗೊಳಿಸಿ ಕೂಡಲೇ ಅಂಕಿ ಅಂಶಗಳೊಂದಿಗೆ ಮತದಾನ ಕೇಂದ್ರಗಳ ಪಟ್ಟಿಯ ವಿವರವನ್ನು ಆಯೋಗಕ್ಕೆ ಸಲ್ಲಿಸಲು ಸೂಚಿಸಲಾಗಿದೆ.
