ಉದಯವಾಹಿನಿ, ಚಂಡೀಗಢ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪಾಕಿಸ್ತಾನ ಮತ್ತು ಮಲೇಷ್ಯಾ ಮೂಲದವರಿಂದ ನಡೆಯುತ್ತಿದ್ದ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಚಟುವಟಿಕೆಯನ್ನು ಅಮೃತಸರ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಇಬ್ಬರು ಸೇರಿ ಒಟ್ಟು 9 ಮಂದಿಯನ್ನ ಅಮೃತಸರ ಪೊಲೀಸರು ಬಂಧಿಸಿದ್ದು, 9.7 ಲಕ್ಷ ರೂ. ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತು ಅಮೃತಸರ ಪೊಲೀಸ್ ಆಯುಕ್ತ ಗುರುಪ್ರೀತ್ ಸಿಂಗ್ ಅವರು ಮಾತನಾಡಿ, ಈ ಜಾಲ ದುಬೈನಿಂದ ಪಾಕಿಸ್ತಾನಕ್ಕೆ ಹಬ್ಬಿದ್ದು, ಸದ್ಯ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಮೂವರು ಆರೋಪಿಗಳು ಮಲೇಷ್ಯಾದಿಂದ ಹಿಂದಿರುಗುತ್ತಿರುವಾಗ ಬಂಧಿಸಲಾಗಿದ್ದು, ಐದು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹಾಗೂ ಒಂದು ಕೆ.ಜಿ. ಹೆರಾಯಿನ್‌ನ್ನು ಜಪ್ತಿ ಮಾಡಿದ್ದೇವೆ. ಇವುಗಳನ್ನು ಡ್ರೋನ್ ಮೂಲಕ ಅಂತಾರಾಷ್ಟ್ರೀಯ ಗಡಿಯಿಂದ ಸಾಗಿಸಲಾಗಿದೆ. ಜೊತೆಗೆ 9 ಎಂಎಂನ ಮೂರು ಗ್ಲಾಕ್ ಪಿಸ್ತೂಲ್‌ಗಳು ಮತ್ತು 2.30 ಬೋರ್ ಚೈನೀಸ್ ಪಿಸ್ತೂಲ್‌ನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದರು.
