ಉದಯವಾಹಿನಿ,ಬೆಂಗಳೂರು: ರಾಜ್ಯದಲ್ಲಿನ ಹೊಸ ವಿಮಾನ ನಿಲ್ದಾಣಗಳನ್ನು ರಾಜ್ಯ ಸರಕಾರದ ವತಿಯಿಂದಲೇ ನಿರ್ವಹಿಸುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತಿದೆ. ಇದರ ಸಾಧಕ-ಬಾಧಕಗಳನ್ನು ನೋಡಿಕೊಂಡು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಸಾವಿರಾರು ಕೋಟಿ ರೂ.ವಿನಿಯೋಗಿಸಿ ರಾಜ್ಯದ ಹಲವೆಡೆ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ್ದೇವೆ. ಆದರೆ ಬಳಿಕ ಇವುಗಳನ್ನು ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಬಿಟ್ಟುಕೊಡುತ್ತಿದ್ದೇವೆ. ಅವರು, ಇವುಗಳನ್ನು ಅದಾನಿ ಸೇರಿದಂತೆ ಹಲವು ಖಾಸಗಿ ಕಂಪನಿಗಳಿಗೆ ವಹಿಸುತ್ತಿದ್ದಾರೆ. ಹೀಗಾಗಿ ನಮ್ಮದೇ ವಿಮಾನ ನಿಲ್ದಾಣಗಳ ಮೇಲೆ ನಮಗೆ ಯಾವ ಹಕ್ಕೂ ಇಲ್ಲದಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಿಸುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ಭಾವನೆ ಇದೆ.

ವಿಮಾನ ನಿಲ್ದಾಣ ಪ್ರಾಧಿಕಾರದವರು ಯಾರಿಗೋ ವಹಿಸುವ ಬದಲು ನಾವೇ ಆ ಕೆಲಸವನ್ನು ಮಾಡಬಹುದು. ಸದ್ಯಕ್ಕೆ ಇದನ್ನು ಎಲ್ಲ ಮಗ್ಗುಲಿನಿಂದಲೂ ಪರಿಶೀಲಿಸಲಾಗುತ್ತಿದೆ. ಮಹಾರಾಷ್ಟ್ರದ ಮಾದರಿಯನ್ನೂ ಗಮನಿಸುತ್ತಿದ್ದೇವೆ. ಸದ್ಯದ ವ್ಯವಸ್ಥೆಯಲ್ಲಿ ರಾಜ್ಯದ ಅಹವಾಲುಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಕನಿಷ್ಠಪಕ್ಷ ಆಲಿಸುವುದೂ ಇಲ್ಲ ಎಂದು ಅವರು ನುಡಿದರು. ಏಕಗವಾಕ್ಷಿ ವ್ಯವಸ್ಥೆ ಬಲವರ್ಧನೆ: ರಾಜ್ಯದಲ್ಲಿ ಪಾರದರ್ಶಕ ಮತ್ತು ಕಾನೂನುಬದ್ಧ ರೀತಿಯಲ್ಲಿ ಬಂಡವಾಳ ಹೂಡಿ, ಉದ್ಯೋಗಸೃಷ್ಟಿ ಮಾಡಲು ಯಾರೇ ಮುಂದೆ ಬಂದರೂ ಅವರನ್ನು ಸ್ವಾಗತಿಸಲಾಗುವುದು. ಇದರಲ್ಲಿ ತಾರತಮ್ಯ ಇರುವುದಿಲ್ಲ. ಆದರೆ ನಾನು ಪ್ರಾಸಂಗಿಕವಾಗಿ ಅದಾನಿ ಹೆಸರು ಹೇಳಿದ್ದನ್ನೇ ಇಟ್ಟುಕೊಂಡು ಬಿಜೆಪಿಯವರು ರಾಜಕೀಯ ಮಾಡುತ್ತಿರುವುದು ಕ್ಷುಲ್ಲಕತನ ಎಂದು ಪಾಟೀಲ್‌ ಹೇಳಿದರು.

Leave a Reply

Your email address will not be published. Required fields are marked *

error: Content is protected !!