ಉದಯವಾಹಿನಿ,ಬೆಂಗಳೂರು: 2021ನೇ ಸಾಲಿನ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿ (Gandhi Peace Prize for the Year 2021) ಭಾನುವಾರ ಪ್ರಕಟವಾಗಿದೆ. ಉತ್ತರಪ್ರದೇಶದ ಗೋರಖ್‌ಪುರನ ಗೀತಾ ಪ್ರೆಸ್ ಸಂಸ್ಥೆಗೆ ಈ ಭಾರಿ ಪ್ರಶಸ್ತಿ ದೊರೆತಿದೆ. ಈ ಕುರಿತಾಗಿ ಕೇಂದ್ರ ಸಂಸ್ಕೃತಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ತೀರ್ಪುಗಾರ ತಂಡ 2023 ರ ಜೂನ್ 18 ರಂದು ಅಹಿಂಸಾತ್ಮಕ ಮತ್ತು ಗಾಂಧಿವಾದಿ ವಿಧಾನಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಗೋರಖ್ಪುರದ ಗೀತಾ ಪ್ರೆಸ್ ಅನ್ನು 2021 ರ ಗಾಂಧಿ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲು ಸರ್ವಾನುಮತದಿಂದ ನಿರ್ಧರಿಸಿದೆ. ಗಾಂಧಿ ಶಾಂತಿ ಪ್ರಶಸ್ತಿಯೂ 1 ಕೋಟಿ ರೂ. ನಗದು, ಪ್ರಶಸ್ತಿ ಪತ್ರ, ಫಲಕ ಮತ್ತು ಸುಂದರ ಸಾಂಪ್ರದಾಯಿಕ ಕರಕುಶಲ ವಸ್ತುವನ್ನು ಒಳಗೊಂಡಿದೆ. 1923 ರಲ್ಲಿ ಸ್ಥಾಪನೆಯಾದ ಗೀತಾ ಪ್ರೆಸ್ ವಿಶ್ವದ ಅತಿದೊಡ್ಡ ಪ್ರಕಾಶನ ಸಂಸ್ಥೆಗಳಲ್ಲಿ ಒಂದು. 16.21 ಕೋಟಿ ಶ್ರೀಮದ್ ಭಗವದ್ಗೀತೆ ಸೇರಿದಂತೆ 14 ಭಾಷೆಗಳಲ್ಲಿ 41.7 ಕೋಟಿ ಪುಸ್ತಕಗಳನ್ನು ಪ್ರಕಟಿಸಿದೆ. ಸಂಸ್ಥೆಯು ಆದಾಯ ಗಳಿಕೆಗಾಗಿ ಎಂದಿಗೂ ಜಾಹೀರಾತನ್ನು ಅವಲಂಬಿಸಿಲ್ಲ. ಗೀತಾ ಪ್ರೆಸ್ ಅದರ ಅಂಗಸಂಸ್ಥೆಗಳೊಂದಿಗೆ, ಸುಧಾರಿತ ಜೀವನ ಮತ್ತು ಎಲ್ಲರ ಯೋಗಕ್ಷೇಮಕ್ಕಾಗಿ ಶ್ರಮಿಸುತ್ತಿದೆ.
