ಉದಯವಾಹಿನಿ, ವಾಷಿಂಗ್ಟನ್: 14 ದೇಶಗಳ ಜೊತೆ ತೆರಿಗೆ ಸಮರ ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಂದು ಮಹತ್ವದ ಘೋಷಣೆ ಹೊರಡಿಸಿದ್ದಾರೆ. ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗಳ ಮೇಲೆ ಸುಂಕ ವಿಧಿಸಿದ ಬೆನ್ನಲ್ಲೇ ತಾಮ್ರದ ಮೇಲೆ 50% ಸುಂಕ ಘೋಷಿಸಿದ್ದಾರೆ. ಜೊತೆಗೆ ಅಮೆರಿಕಕ್ಕೆ ಆಮದಾಗುವ ಫಾರ್ಮಾ ಔಷಧಗಳ ಮೇಲೆ 200% ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.
ಕ್ಯಾಬಿನೆಟ್ ಸಭೆಗೆ ಟ್ರಂಪ್ ಈ ವಿಷಯ ತಿಳಿಸಿದ್ದಾರೆ. ನಾವು ತಾಮ್ರದ ಮೇಲೆ 50% ಸುಂಕ ವಿಧಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಅಲ್ಲದೇ 1 ವರ್ಷದ ನಂತರ ಅಮೆರಿಕ ಆಮದು ಮಾಡಿಕೊಳ್ಳುವ ಔಷಧಗಳ ಮೇಲಿನ ಸುಂಕ 200% ರಷ್ಟು ಹೆಚ್ಚಾಗಬಹುದು. ಸೆಮಿಕಂಡಕ್ಟರ್ ಚಿಪ್‌ಗಳಂತಹ ನಿರ್ದಿಷ್ಟ ಉತ್ಪನ್ನಗಳ ಮೇಲೂ ಹೆಚ್ಚಿನ ಸುಂಕ ಬರಬಹುದು ಎಂದು ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ. ಅಮೆರಿಕ ಶೀಘ್ರದಲ್ಲೇ ಫಾರ್ಮಾ ಔಷಧಿಗಳ ಮೇಲಿನ ಸುಂಕ ಘೋಷಣೆ ಮಾಡಲಿದೆ. ಆದ್ರೆ ತಯಾರಕ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನ ಸ್ಥಳಾಂತರಿಸಿಕೊಳ್ಳಲು ಸಮಯ ಕೇಳಿದ್ದಾರೆ. ಅದಕ್ಕಾಗಿ 1 ವರ್ಷ, ಹೆಚ್ಚೆಂದರೆ ಒಂದೂವರೆ ವರ್ಷ ಸಮಯಾವಕಾಶ ನೀಡಲಿದ್ದೇವೆ.
