ಉದಯವಾಹಿನಿ, ಬೆಂಗಳೂರು: ಕೆನರಾ ಬ್ಯಾಂಕ್‌ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿರುವ ವಿಜಯಪುರದ ಮನಗೂಳಿ ಪೊಲೀಸ್ ಠಾಣೆಯ 8 ವಿಶೇಷ ತಂಡಗಳು 15 ಮಂದಿ ಡಕಾಯಿತರನ್ನು ಬಂಧಿಸಿ 1.16 ಕೋಟಿ ನಗದು,39 ಕೆಜಿ ಬಂಗಾರದ ಗಟ್ಟಿ ಸೇರಿದಂತೆ 39.26 ಕೋಟಿ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿವೆೆ.
ಹುಬ್ಬಳ್ಳಿಯ ವಿಜಯ ಕುಮಾರ, ಚಂದ್ರಶೇಖರ,ಸುನೀಲ, ಬಾಲರಾಜ ಮಣಿಕಮ್,ಗುಂಡು ಜೊಸೇಫ್,ಚಂದನ್‌ರಾಜ್,ಇಜಾಜ್,ಪೀಟರ್, ಸುಸೈರಾಜ್,ಬಾಬುರಾವ,ಮಹಮದ ಆಸೀಫ್, ಅನೀಲ,ಅಬು,ಸೋಲೋಮ್‌ವೇಸ್ಲಿ ಮತ್ತು ಮರಿಯಾದಾಸ ಬಂಧಿತ ಡಕಾಯಿತರು. ಮೇ 23 ರ ಸಂಜೆಯಿಂದ 25ರ ಅವಧಿಯ ನಡುವೆ ವಿಜಯಪುರ ಜಿಲ್ಲೆಯ ಮನಗೂಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ನ ಕಿಟಕಿಯ ಸರಳುಗಳನ್ನು ಕಳ್ಳರ ಗ್ಯಾಂಗ್ ಕತ್ತರಿಸಿ, ಆ ಮೂಲಕ ಒಳನುಗ್ಗಿತ್ತು.
ನಂತರ ಬ್ಯಾಂಕ್ ಸೇಫ್ ಲಾಕರ್ ರೂಂ ನ ಗ್ರಿಲ್ ಸರಳುಗಳನ್ನು ಕತ್ತರಿಸಿ, ಬೆಂಡ್ ಮಾಡಿ ಒಳ ಹೊಕ್ಕು,ಲಾಕರ್‌ನಲ್ಲಿದ್ದ ಸುಮಾರು 53.26 ಕೋಟಿ ರೂ. ಮೌಲ್ಯದ 58.97 ಕೆಜಿ ಬಂಗಾರದ ಆಭರಣಗಳು ಹಾಗೂ 5.20 ಲಕ್ಷ ರೂ. ನಗದನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಅಲ್ಲದೇ ತಮ ಗುರುತು ಸಿಗಬಾರದೆಂದು ಬ್ಯಾಂಕ್‌ನಲ್ಲಿದ್ದ ಸಿಸಿ ಕ್ಯಾಮೇರಾಗಳ ಎನ್‌ವಿಆರ್ ಸಹ ತೆಗೆದುಕೊಂಡು ಹೋಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮನಗೂಳಿ ಠಾಣೆ ಪೊಲೀಸರು ಕಳ್ಳರಿಗಾಗಿ ತನಿಖೆ ಕೈಗೊಂಡಿದ್ದರು.ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರು ಸುಮಾರು 100 ಸಿಬ್ಬಂದಿಗಳನ್ನೊಳಗೊಂಡ 8 ವಿಶೇಷ ತಂಡಗಳನ್ನು ಆರೋಪಿಗಳ ಪತ್ತೆಗಾಗಿ ರಚಿಸಿದ್ದರು. ಈ ತಂಡಗಳು ಹಲವು ಕಡೆಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಮೊದಲು ಮೂವರನ್ನು ಬಂಧಿಸಿ 10.75 ಕೋಟಿ ರೂ.ಮೌಲ್ಯದ 10 ಕೆಜಿ ಬಂಗಾರದ ಆಭರಣ ಹಾಗೂ ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದವು.
