ಉದಯವಾಹಿನಿ, ಅಹಮದಾಬಾದ್: ಕಳೆದ ಜೂನ್ 12ರಂದು ಅಹ್ಮದಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಎಎಐಬಿ ಪ್ರಾಥಮಿಕ ವರದಿ ಬಿಡುಗಡೆಯಾಗಿದೆ. 15 ಪುಟಗಳ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಬ್ಲ್ಯಾಕ್ ಬಾಕ್ಸ್ ಸೇರಿ ಇತರೆ ಸಾಕ್ಷ್ಯಗಳ ಆಧಾರದ ಮೇಲೆ ವಿಮಾನ ದುರಂತಕ್ಕೆ ಕಾರಣ ಕಂಡುಕೊಳ್ಳಲಾಗಿದೆ.
ಜೂನ್ 12ರಂದು ಅಹ್ಮದಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಮೊದಲ ತನಿಖಾ ವರದಿ ಬಿಡುಗಡೆಯಾಗಿದೆ. ವಿಮಾನ ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಸುತ್ತಿದ್ದ ಸ್ವಿಚ್‌ಗಳು ಆಫ್ ಆಗಿದ್ದವು. ಇದಾದ ನಂತರ ಪೈಲಟ್‌ಗಳ ನಡುವೆ ಗೊಂದಲ ಉಂಟಾಯಿತು ಎಂದು ವರದಿ ಹೇಳಿದೆ.
ವಿಮಾನ ಅಪಘಾತ ತನಿಖಾ ಬ್ಯೂರೋ ಈ ವರದಿಯನ್ನು ಬಿಡುಗಡೆ ಮಾಡಿದೆ. ಟೇಕ್-ಆಫ್ ಸಮಯದಲ್ಲಿ ಸಹ-ಪೈಲಟ್ ವಿಮಾನವನ್ನು ನಿಯಂತ್ರಿಸುತ್ತಿದ್ದರೆ, ಮುಖ್ಯ ಪೈಲಟ್ ಮೇಲ್ವಿಚಾರಣೆ ಮಾಡುತ್ತಿದ್ದರು. ವಿಮಾನವು ಗರಿಷ್ಠ 180 ನಾಟ್ಸ್ ವೇಗ ತಲುಪಿದ ತಕ್ಷಣ, ಇಂಧನ ಸ್ವಿಚ್‌ಗಳು ಒಂದರ ನಂತರ ಒಂದು ಆಫ್ ಆಗಿವೆ. ಇದರ ಪರಿಣಾಮವಾಗಿ, ಎಂಜಿನ್‌ಗಳಿಗೆ ಇಂಧನ ಪೂರೈಕೆ ನಿಂತು ಅವುಗಳ ಕಾರ್ಯಕ್ಷಮತೆ ಕುಸಿಯಿತು ಎಂದು ವರದಿ ಹೇಳಿದೆ.
