ಉದಯವಾಹಿನಿ, ಬೆಂಗಳೂರು: ಶಾಸಕರುಗಳ ಜೊತೆ ಪ್ರತ್ಯೇಕವಾಗಿ ಒಟ್ಟು 6 ದಿನಗಳ ಕಾಲ ಅಭಿಪ್ರಾಯ ಸಂಗ್ರಹಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಇದೇ ತಿಂಗಳ 16 ರಂದು ಸಚಿವರ ಜೊತೆ ಚರ್ಚೆ ನಡೆಸುವ ಮೂಲಕ ಮೌಲ್ಯಮಾಪನಕ್ಕೆ ಮುಂದಾಗಿದ್ದಾರೆ.ಸುರ್ಜೇವಾಲ ಅವರ ಕಾರ್ಯವೈಖರಿಗೆ ಕಾಂಗ್ರೆಸ್ ಪಕ್ಷದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ರಾಜ್ಯದಲ್ಲಿ ಸಿದ್ದರಾಮಯ್ಯ ಪ್ರಭಾವಿ ನಾಯಕರಾಗಿದ್ದು, ಅವರನ್ನೂ ದೂರ ಇಟ್ಟು ಸುರ್ಜೇವಾಲ ನೇರವಾಗಿ ಕಾಂಗ್ರೆಸ್ ಶಾಸಕರ ಜೊತೆ ಅಭಿಪ್ರಾಯ ಸಂಗ್ರಹಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.ಶಾಸಕರಿಗೆ ತಮ ಅಹವಾಲು ಹೇಳಿಕೊಳ್ಳಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಸುಲಭವಾಗಿ ಲಭ್ಯವಿದ್ದರು. ಅದರ ಹೊರತಾಗಿ ಸುರ್ಜೇವಾಲ ಸಭೆ ನಡೆಸಿದ್ದೇಕೆ?, ಇದು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಅನುಪಸ್ಥಿತಿಯನ್ನು ಪ್ರಸ್ತಾಪಿಸಿದಂತಾಯಿತಲ್ಲವೇ..? ಎಂಬ ಟೀಕೆಗಳು ಕೇಳಿಬಂದಿವೆ.
ಶಾಸಕರ ಜೊತೆ ಚರ್ಚೆ ನಡೆಸಿದ್ದಕ್ಕಷ್ಟೇ ಸೀಮಿತವಾಗದೆ ಸುರ್ಜೇವಾಲ ಈಗ ಸಚಿವರ ಜೊತೆ ಪ್ರತ್ಯೇಕ ಸಮಾಲೋಚನೆಯಲ್ಲಿ ಮುಂದಾಗಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಶಾಸಕರ ಜೊತೆ ಚರ್ಚೆಯ ವೇಳೆ ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಮಾಡಿದ್ದೀರ, ಇನ್ನೂ ಯಾವ ರೀತಿ ಅಭಿವೃದ್ಧಿಯಾಗಬೇಕು?, ಸಚಿವರು ಶಾಸಕರಿಗೆ ಯಾವ ರೀತಿ ಸ್ಪಂದಿಸುತ್ತಿದ್ದಾರೆ ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದರು.ಈಗ ಸಚಿವರಿಗೆ ಇಲಾಖೆಗಳಿಗೆ ಸಂಬಂಧಪಟ್ಟ ಪ್ರಶ್ನೆಗಳ ನಮೂನೆಗಳನ್ನು ಈಗಾಗಲೇ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಮೊದಲ ಮತ್ತು ಎರಡನೇ ಹಂತದಲ್ಲಿ ತಲಾ ಮೂರು ದಿನ ಶಾಸಕರ ಜೊತೆ ಪ್ರತ್ಯೇಕ ಸಭೆ ನಡೆಸಿದಾಗ ಕೆಲ ಸಚಿವರು ತಮಗೂ ಸಮಯ ನೀಡುವಂತೆ ಸುರ್ಜೇವಾಲ ಅವರ ಬಳಿ ಮನವಿ ಮಾಡಿಕೊಂಡಿದ್ದರು.
