ಉದಯವಾಹಿನಿ, ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌‍ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ವರಿಷ್ಠ ನಾಯಕರಿಗೆ ಗೌರವ ಕೊಡುವ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಬಲಾಬಲ ಪ್ರದರ್ಶನ ಮಾಡುವ ಅಗತ್ಯ ಇಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್‌ ಮತ್ತೊಬ್ಬರಿಗೆ ಮಾದರಿಯಾಗುವ ವ್ಯಕ್ತಿತ್ವ ಹೊಂದಿದ್ದಾರೆ. ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ನಂಬುವ ಸ್ವಾಮೀಜಿಯವರು ಮುಖ್ಯಮಂತ್ರಿ ಯೋಗ ಬರುತ್ತದೆ ಎಂದು ಹೇಳಿದ್ದಾರೆ ಎಂದರು.
ಸ್ವಾಮೀಜಿ ಬಳಿ ಹಾಗೂ ಆಯಾ ಪ್ರದೇಶದ ಜನರಿಗೆ ನಮವರು ಮುಖ್ಯಮಂತ್ರಿಯಾಗಲಿ ಎಂದು ಹೇಳುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ರಾಜಕಾರಣದಲ್ಲಿ ಅಲ್ಲಗಳೆಯಲು ಆಗುವುದಿಲ್ಲ. ಅಭಿಪ್ರಾಯ ವ್ಯಕ್ತಪಡಿಸುವುದನ್ನು ತಪ್ಪು ಎಂದು ಭಾವಿಸಲಾಗದು ಎಂದು ಹೇಳಿದರು. 2028 ರ ವಿಧಾನಸಭೆ ಚುನಾವಣೆಗೆ ತಮದೇ ನಾಯಕತ್ವ ಎಂದು ಸಿದ್ದರಾಮಯ್ಯ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್‌, ಅವರು ಹಿರಿಯ ನಾಯಕರು. ರಾಜಕಾರಣದಲ್ಲಿ ನಿವೃತ್ತಿ ಎಂಬುದಿಲ್ಲ. ಅವರ ಹಿತಾಸಕ್ತಿಗನುಗುಣವಾಗಿ ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಾಗಿದ್ದಾರೆ. ಕುರ್ಚಿ ಖಾಲಿ ಇಲ್ಲದೇ ಇರುವಾಗ ಆ ಬಗ್ಗೆ ಚರ್ಚೆ ಮಾಡುವುದು ಅನಗತ್ಯ ಎಂದರು.
ರಾಜಕಾರಣದಲ್ಲಿ ಕಾಂಗ್ರೆಸ್‌‍ ಪಕ್ಷದಲ್ಲಿ ಯಾವುದೇ ಜಗಳವಿಲ್ಲ. ಮುಖ್ಯಮಂತ್ರಿ ಬಗ್ಗೆ ವರಿಷ್ಠರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿಯಾಗುವ ಆತುರವಿಲ್ಲ, ಹುದ್ದೆ ಕೈತಪ್ಪುವ ಆತಂಕವೂ ಇಲ್ಲ. ಪಕ್ಷ ಕೊಟ್ಟಿರುವ ಸೂಚನೆಯನ್ನು ಪಾಲಿಸುತ್ತಿದ್ದಾರೆ. ಈ ಚರ್ಚೆ ಯಾವ ಕಾರಣಕ್ಕೆ ಮುನ್ನೆಲೆಗೆ ಬಂದಿದೆಯೋ ಗೊತ್ತಿಲ್ಲ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!