ಉದಯವಾಹಿನಿ,ಶಿವಮೊಗ್ಗ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಶಿವಮೊಗ್ಗದಲ್ಲಿಂದು ಮಾತನಾಡಿದರು. ಕಾಂಗ್ರೆಸ್ ಭರವಸೆಗಳ ವಿರುದ್ಧ ವಾಗ್ದಾಳಿ ನಡೆಸಿದರು. ಚುನಾವಣಾ ಸಂದರ್ಭದಲ್ಲಿ ಅವರು ಭರವಸೆ ಕೊಟ್ಟಿರುವುದು ಏನು..? ಬಡತನ ರೇಖೆಗಿಂತ ಕಡಿಮೆ ಇರುವ ಜನರಿಗೆಲ್ಲರಿಗೂ ಉಚಿತ 10 ಕೆಜಿ ಅಕ್ಕಿ ನೀಡುತ್ತೇವೆ ಎಂದಿದ್ದರು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ನೀಡುತ್ತಿದ್ದ 5 ಕೆಜಿ ಅಕ್ಕಿ ಸೇರಿಸಿಕೊಂಡು ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟಿರೋದು ಐದು ಕೆಜಿ ಅಕ್ಕಿ. ಇವರು ಭರವಸೆ ಕೊಟ್ಟಿರೋದು ಹತ್ತು ಕೆಜಿ ಅಕ್ಕಿಯನ್ನು ಸೇರಿಸಿ ಪ್ರತಿ ವ್ಯಕ್ತಿಗೆ 15 ಕೆಜಿ ಅಕ್ಕಿ ಕೊಡಿ.
ಅದು ಬಿಟ್ಟು ಕೇಂದ್ರದ ಐದು ಕೆಜಿ ಜೊತೆ ಇವರದ್ದು ಕೇವಲ ಐದು ಕೆಜಿ ಸೇರಿಸಿ ಕೊಡಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ನಮ್ಮ ಕೇಂದ್ರ ಸರ್ಕಾರ ಇಲ್ಲ. ಅದನ್ನ ನೀವೇ ಈಡೇರಿಸಬೇಕು ಎಂದು ಹೇಳಿದರು. ಇದರ ಬೆನ್ನಲ್ಲೇ ರಾಗಿ ಗೋಧಿಯನ್ನೂ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ರಾಜ್ಯದಲ್ಲೇ ಇವೆಲ್ಲವೂ ಕೂಡ ಬೆಳೆಯಲಾಗುತ್ತೆ. ನಮ್ಮ ರಾಜ್ಯ ಕಾಂಗ್ರೆಸ್ ಗೆ ಬೇರೆ ರಾಜ್ಯಗಳ ಮೇಲೆ ಪ್ರೀತಿ ಜಾಸ್ತಿ. ರಾಜ್ಯದಲ್ಲಿ ಬೆಳೆದ ಬೆಳೆಗಳನ್ನ ಬಳಸಿದರೆ ನಮ್ಮ ರೈತರಿಗೆ ಸಹಾಯವಾಗುತ್ತದೆ. ಇದನ್ನ ಬಿಟ್ಟು ಕೇಂದ್ರ ಸರ್ಕಾರ ಕೊಡಲಿ ಎಂದು ಹೇಳೋದು ಸರಿಯಲ್ಲ ಹಿಂದೆ ಅನ್ನ ಭಾಗ್ಯ ಯೋಜನೆಯಲ್ಲಿ ನಮ್ಮ ಅಕ್ಕಿ ಬಳಸಿ ಅವರ ಫೋಟೋ ಅಂಟಿಸಿಕೊಂಡಿದ್ದರು. ತಾವು ಕೊಟ್ಟ ಭರವಸೆನ ಮೊದಲು ಉಳಿಸಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.
