ಉದಯವಾಹಿನಿ,ಮೈಸೂರು: ಶಕ್ತಿ ದೇವಿಯರ ಪೂಜೆಗೆ ಪ್ರಶಸ್ತ ಕಾಲ ಅಂತಾನೆ ಕರೆಯಲ್ಪಡುವ ಆಷಾಢ ಮಾಸ ಪ್ರಾರಂಭವಾಗಿದೆ. ಆಷಾಢ ಮಾಸ ಆರಂಭ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಜನಸಾಗರವೇ ಹರಿದುಬಂದಿದೆ. ನಾಡದೇವತೆ ಚಾಮುಂಡೇಶ್ವರಿಯ ದರ್ಶನಕ್ಕೆ ಭಕ್ತಾದಿಗಳು ಹಾಗೂ ಪ್ರವಾಸಿಗರು ಮುಗಿಬಿದ್ದಿದ್ದಾರೆ. ಭಕ್ತರು ಹಾಗೂ ಪ್ರವಾಸಿಗರಿಂದ ಮೈಸೂರು ಚಾಮುಂಡೇಶ್ವರಿ ದೇಗುಲ ತುಂಬಿ ತುಳುಕಿದೆ. ಭಾನುವಾರ ಬೆಳಗ್ಗೆಯಿಂದಲೇ ಅಮ್ಮನ ದರ್ಶನಕ್ಕೆ ಭಕ್ತರ ದಂಡೇ ಆಗಮಿಸಿದ್ದು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾಗಿದ್ದಾರೆ. ಭಾನುವಾರ ಅಮಾವಾಸ್ಯೆ ಆದ್ದರಿಂದ ದೇಗುಲಕ್ಕೆ ಜನಸಾಗರ ಹರಿದುಬಂತು. 100 ರೂಪಾಯಿ ಟಿಕೆಟ್ ಪಡೆದು ನಿಲ್ಲುವ ವಿಶೇಷ ದರ್ಶನ ಹಾಗೂ ಧರ್ಮದರ್ಶನ ಎರಡೂ ವಿಭಾಗದಲ್ಲಿಯೂ ನೂಕು ನುಗ್ಗಲು ಜೋರಾಗಿತ್ತು. ಮುಂಜಾನೆಯಿಂದಲೇ ಭಕ್ತಾದಿಗಳು ದೇಗುಲದ ಆವರಣದಲ್ಲಿ ಜಮಾಯಿಸಿದರು.
ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ಇರೋದ್ರಿಂದ ಭಕ್ತಾದಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಸರ್ಕಾರಿ ಬಸ್ಗಳಲ್ಲಿ ಮೈಸೂರಿಗೆ ಆಗಮಿಸಿದ ಮಹಿಳೆಯರು ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆಯಲು ಮುಗಿಬಿದ್ದಿದ್ದಾರೆ. ಆಷಾಢ ಶುಕ್ರವಾರಕ್ಕೆ ಬೆಟ್ಟದಲ್ಲಿ ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಬೆಟ್ಟದ ಮೆಟ್ಟಿಲು ಮಾರ್ಗವನ್ನು ಶುಚಿಗೊಳಿಸಲಾಗಿದೆ. ಆಷಾಢ ಶುಕ್ರವಾರಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ. ಯಾವುದೇ ತೊಂದರೆಯಾಗದಂತೆ ಅಣಿಗೊಳಿಸಲಾಗುತ್ತಿದೆ. ಭಕ್ತರ ನಿಯಂತ್ರಣಕ್ಕೆ ಬ್ಯಾರಿಕೇಡ್ ವ್ಯವಸ್ಥೆ, ಪ್ರಸಾದ ಕೌಂಟರ್ ಎಲ್ಲವೂ ಸಿದ್ಧಗೊಂಡಿದೆ.
