ಉದಯವಾಹಿನಿ,ದಾವಣಗೆರೆ: ಕಿಚ್ಚ ಸುದೀಪ್ ಶ್ರೇಷ್ಟ ನಟನಾಗೋ ಅವಕಾಶವಿದೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನನ್ನ ವಿರುದ್ಧವೇ ಚಿತ್ರ ನಟ, ನಮ್ಮದೇ ಸಮುದಾಯದ ಕಿಚ್ಚ ಸುದೀಪ್ ಬಂದು ನಮ್ಮ ವಿರುದ್ಧವೇ ಭಾಷಣ, ಪ್ರಚಾರ ಮಾಡಿದರು ಎಂದು ಸಹಕಾರ ಸಚಿವ ರಾಜಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಿ ಮಾತನಾಡಿ, ಕಿಚ್ಚ ಸುದೀಪ್ ಸಾಮಾನ್ಯ ಕ್ಷೇತ್ರಗಳಲ್ಲಿ ಬಂದು, ಹೋಗಿ ಪ್ರಚಾರ ಮಾಡಿದ್ದರೆ ಏನೂ ಅನ್ನಿಸುತ್ತಿರಲಿಲ್ಲ. ಆದರೆ ಎಸ್ಟಿ ಮೀಸಲು ಕ್ಷೇತ್ರದಲ್ಲಿ ಬಂದು, ನನ್ನ ವಿರುದ್ಧವೇ ಪ್ರಚಾರ ಮಾಡಿದ್ದು ಮಾತ್ರ ನೋವೆನಿಸಿತು ಎಂದು ಅವರು ಹೇಳಿದರು. ನಮ್ಮವರು ಎರಡೂ ಕಡೆ ಸ್ಪರ್ಧಿಸಿದಾಗ ಒಬ್ಬರ ಪರವಾಗಿ, ಮತ್ತೊಬ್ಬರ ವಿರುದ್ಧವಾಗಿ ಕಿಚ್ಚ ಸುದೀಪ್ ಪ್ರಚಾರ ಮಾಡಿದ್ದು, ನಮಗೆಲ್ಲರಿಗೂ ಬೇಸರ ತರಿಸಿತು. ಇದು ಪ್ರತಿಭಾನ್ವಿತ ನಟನ ಭವಿಷ್ಯಕ್ಕೆ ಕುತ್ತು ತರುತ್ತದೆ. ಆತನಿಗೆ ಅನುಭವ ಕಡಿಮೆ ಇದೆ. ಶ್ರೇಷ್ಠ ನಟನಾಗಲು ಅವಕಾಶ ಇದೆ. ಇನ್ನಾದರೂ ಕಿಚ್ಚ ಸುದೀಪ್ ಇದನ್ನೆಲ್ಲಾ ಅರ್ಥ ಮಾಡಿಕೊಂಡು, ಮುಂದುವರಿಯಲಿ ಎಂದು ಚಿತ್ರನಟ ಸುದೀಪ್ಗೆ ರಾಜಣ್ಣ ಸಲಹೆ ನೀಡಿದರು.
