ಉದಯವಾಹಿನಿ,ರಾಮನಗರ: ಜನನಿಬಿಡ ಪ್ರದೇಶದಲ್ಲಿರುವ ಅತ್ಯಾಧುನಿಕ ‘ಇ.ಪಿ ಟಾಯ್ಲೆಟ್’ (ಎಲೆಕ್ಟ್ರಾನಿಕ್ ಪಬ್ಲಿಕ್ ಟಾಯ್ಲೆಟ್) ಅದು. ಆದರೆ, ಜನ ಅದರತ್ತ ಸುಳಿಯಲಾಗದಂತೆ ಕಳೆಗಳು ಬೆಳೆದಿವೆ. ಸುತ್ತಲೂ ಕಸ ತಂದು ಎಸೆಯಲಾಗಿದೆ. ಸ್ವಚ್ಛತೆ ಕಂಡು ವರ್ಷವಾಗಿರುವುದರಿಂದ ಅಲ್ಲಿನ ಆವರಣ ಗಬ್ಬೆದ್ದು ನಾರುತ್ತಿದೆ. ಟಾಯ್ಲೆಟ್‌ನ ಬಿಡಿ ಭಾಗಗಳು ತುಕ್ಕು ಹಿಡಿದು ಕಂದು ಬಣಕ್ಕೆ ತಿರುಗಿವೆ. ನಗರಸಭೆಯು ನಗರದ ವಿವಿಧೆಡೆ ನಿರ್ಮಿಸಿರುವ ಪಾವತಿಸಿ ಬಳಸುವ ಅತ್ಯಾಧುನಿಕ ‘ಇ.ಪಿ ಟಾಯ್ಲೆಟ್’ಗಳ ದುಸ್ಥಿತಿ ಇದು. ಸಾರ್ವಜನಿಕ ಸ್ಥಳಗಳಲ್ಲಿ ಮಲ -ಮೂತ್ರ ವಿಸರ್ಜನೆಗಾಗಿ, ನಗರಸಭೆಯು ನಾಲ್ಕು ವರ್ಷಗಳ ಹಿಂದೆ 7 ಕಡೆ ಈ ಟಾಯ್ಲೆಟ್‌ಗಳನ್ನು ಅಳವಡಿಸಿತ್ತು. ಆರಂಭದಲ್ಲಿ ಅತ್ತ ಗಮನ ಹರಿಸಿದ್ದು ಬಿಟ್ಟರೆ, ಮತ್ತೆ ತಿರುಗಿ ನೋಡಲಿಲ್ಲ. ಜನ ಬಳಕೆಯಿಂದ ದೂರ ಉಳಿದಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಟಾಯ್ಲೆಟ್‌ಗಳು, ಇದೀಗ ಪಾಳು ಬಿದ್ದ ಸ್ಥಿತಿಯಲ್ಲಿವೆ.
₹45.50 ಲಕ್ಷ ವೆಚ್ಚ: 2019ರಲ್ಲಿ ನಗರಸಭೆ ಪೌರಾಯುಕ್ತರಾಗಿದ್ದ ಶುಭ ಬಿ. ಅವರ ಅವಧಿಯಲ್ಲಿ, 14ನೇ ಹಣಕಾಸು ಯೋಜನೆಯಡಿ ಇ-ಟಾಯ್ಲೆಟ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿ ಟಾಯ್ಲೆಟ್‌ಗೂ ₹6.50 ಲಕ್ಷದಂತೆ ಒಟ್ಟು 7ಕ್ಕೆ ₹45.50 ಲಕ್ಷ ವೆಚ್ಚವಾಗಿದೆ. ಸಾಮಾನ್ಯ ಸಾರ್ವಜನಿಕ ಶೌಚಾಲಯಗಳು ಇಲ್ಲದ ಜಾಗದಲ್ಲಿ, ಪಾವತಿಸಿ ಬಳಸುವ ಈ ಟಾಯ್ಲೆಟ್‌ಗಳನ್ನು ನಿರ್ಮಿಸಲಾಗಿತ್ತು.
