ಉದಯವಾಹಿನಿ,ನಾಪೋಕ್ಲು:  ಇತ್ತೀಚಿನ ವರ್ಷಗಳಲ್ಲಿ ಮಳೆಗಾಲ ಎಂದರೆ ಕೊಡಗಿನ ಜನತೆಗೆ ದುಃಸ್ವಪ್ನದಂತೆ ಕಾಡುತ್ತಿದೆ. ತಲಕಾವೇರಿ- ಭಾಗಮಂಡಲದಿಂದ ಆರಂಭಗೊಂಡು ಕಾವೇರಿ ನದಿ ಹರಿವಿನ ತಾಣದುದ್ದಕ್ಕೂ ಇಲ್ಲಿನ ಜನತೆಗೆ ಆತಂಕ ತಪ್ಪಿದ್ದಲ್ಲ. ತೋಟ- ಗದ್ದೆಗಳು, ಸೇತುವೆಗಳು ಜಲಾವೃತವಾಗಿ ಅಲ್ಲಲ್ಲಿ ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ನದಿತಟದ ಜನರು ಬದುಕು ಸಾಗಿಸುವಂತಹ ಸನ್ನಿವೇಶ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಅಲ್ಲಲ್ಲಿ ಸೇತುವೆಗಳು, ತಡೆಗೋಡೆಗಳು ನಿರ್ಮಾಣಗೊಂಡಿದ್ದರೂ ಹಲವೆಡೆ ಪೂರ್ಣಗೊಳ್ಳದ ಕಾಮಗಾರಿಯಿಂದಾಗಿ ಮಳೆಗಾಲದ ಆತಂಕ ಜನರನ್ನು ಬಾಧಿಸತೊಡಗಿದೆ. ಕಾವೇರಿ ತವರಾದ ಕೊಡಗು ಜಿಲ್ಲೆಯ ಏಕೈಕ ಮೇಲ್ಸೇತುವೆ ಎಂಬ ಖ್ಯಾತಿ ಭಾಗಮಂಡಲದ ಮೇಲ್ಸೇತುವೆಯದ್ದು. ಇದರ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದರೂ, ಮಳೆಗಾಲದಲ್ಲಿ ಸಾರ್ವಜನಿಕರ ಬಳಕೆಗೆ ಲಭಿಸುವುದು ಕನಸಾಗಿಯೆ ಉಳಿದಿದೆ.
ಇದೀಗ ಮುಂಗಾರು ಕಾಲಿಸಿದ್ದರೂ ಭಾಗಮಂಡಲದಲ್ಲಿ ಮಳೆ ಬಿರುಸು ಪಡೆದಿಲ್ಲ. ನಡು ಮಳೆಗಾಲದಲ್ಲಿ ಮಳೆ ಬಿರುಸುಗೊಂಡು ಕಾವೇರಿ ಜಲಾವೃತವಾದಾಗ ಸಂಚಾರಕ್ಕೆ ಮೇಲ್ಸೇತುವೆ ಲಭಿಸಿದರೆ ಜನರಿಗೆ ಅನುಕೂಲವಾಗುತ್ತಿತ್ತು. ಆದರೆ, ಈ ಸಾಧ್ಯತೆ ತೀರಾ ಕಡಿಮೆ. ಜಿಲ್ಲೆಯ ಪುಣ್ಯಕ್ಷೇತ್ರ ಭಾಗಮಂಡಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಎರಡು, ಮೂರು ತಿಂಗಳ ಕಾಲ ನಿರಂತರ ಸಂಪರ್ಕ ಕಡಿತಗೊಳ್ಳುತ್ತಿದ್ದು, ಗ್ರಾಮಸ್ಥರ ಸಮಸ್ಯೆಯನ್ನು ನೀಗಿಸಲು ₹ 26.86 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿಗೆ ಹಸಿರು ನಿಶಾನೆ ನೀಡಲಾಯಿತು. 2018ರಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು 2019ರ ಜನವರಿಯಲ್ಲಿ ಮೇಲ್ಸೆತುವೆ ಕಾಮಗಾರಿ ಆರಂಭಗೊಂಡಿತು. ತೇಜಸ್ ಇನ್ಫ್ರೋ ಪ್ರೈವೇಟ್ ಲಿಮಿಟೆಡ್ ಮೇಲ್ಸೇತುವೆ ಗುತ್ತಿಗೆ ಪಡೆದಿದ್ದು ಜಿಲ್ಲೆಯಲ್ಲಿ ಮೊದಲ ಮೇಲ್ಸೇತುವೆಯಾಗಿ ಕಾಮಗಾರಿ ಆರಂಭಗೊಂಡಿತು.

Leave a Reply

Your email address will not be published. Required fields are marked *

error: Content is protected !!