ಉದಯವಾಹಿನಿ,ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದ ಟ್ರಾಫಿಕ್ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ವಿನೂತನ ಮಾರ್ಗ ಕಂಡುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಪರಿಶೀಲನೆ ನಡೆಸುವ ಪೊಲೀಸರು, ಸಂಚಾರ ನಿಯಮ ಉಲ್ಲಂಘನೆ ಮಾಡಿ ಫೋಟೋ, ವಿಡಿಯೋ ಹಾಕುವವರನ್ನು ಗುರ್ತಿಸಿ ಅವರಿಗೆ ದಂಡ ವಿಧಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರು ದಕ್ಷಿಣ ವಿಭಾಗದ ಸಂಚಾರ ಪೊಲೀಸರು, ವ್ಹೀಲಿಂಗ್ ಹಾಗೂ ಅತಿ ವೇಗದ ವಾಹನ ಚಾಲನೆ ಆರೋಪದ ಮೇಲೆ ಯುವಕರನ್ನು ಬಂಧಿಸಿದ್ದಾರೆ. ಬೆಂಗಳೂರು ನಗರ ದಕ್ಷಿಣ ವಿಭಾಗದ ಟ್ರಾಫಿಕ್ ಡಿಸಿಪಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ತಮ್ಮ ವ್ಯಾಪ್ತಿಯ ಚಾಮರಾಜಪೇಟೆ ಐದನೇ ಮುಖ್ಯ ರಸ್ತೆ, ಹನುಮಂತ ನಗರ 7ನೇ ಅಡ್ಡ ರಸ್ತೆ, ಜೆ. ಪಿ. ನಗರ ಅಂಡರ್ ಪಾಸ್, ಇಲಿಯಾಸ್ ನಗರ, ಕೆ. ಎಸ್. ಲೇಔಟ್ ರಿಂಗ್ ರೋಡ್ ಸೇರಿದಂತೆ ಹಲವೆಡೆ ವ್ಹೀಲಿಂಗ್ ಮಾಡುವವರ ಹಾವಳಿ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ. ವ್ಹೀಲಿಂಗ್ ಮಾಡುವ ಯುವಕರು ತಮ್ಮ ದುಸ್ಸಾಹಸದ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಇಂಥವರನ್ನು ಪತ್ತೆ ಹಚ್ಚುತ್ತಿರುವ ಪೊಲೀಸರು ಕಾನೂನು ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತಿದ್ದಾರೆ. ಈವರೆಗೆ ವ್ಹೀಲಿಂಗ್ ಸೇರಿದಂತೆ ನಿರ್ಲಕ್ಷತೆಯಿಂದ ವಾಹನ ಚಾಲನೆ ಮಾಡಿದ ಆರೋಪದ ಮೇಲೆ ಪೊಲೀಸರು 26 ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ 21 ಮಂದಿ 18 ವರ್ಷ ಮೇಲ್ಪಟ್ಟವರಾದರೆ, ಐವರು ಆರೋಪಿಗಳು ಅಪ್ತಾಪ್ತರು. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಹಾಗೂ ಇನ್‌ಸ್ಟಾ ಗ್ರಾಂಗಳನ್ನು ನಿರಂತರವಾಗಿ ಪರಿಶೀಲನೆ ಮಾಡುವ ಪೊಲೀಸರು, ಈ ರೀತಿ ಅಪಾಯಕಾರಿ ಸ್ಟಂಟ್ ಮಾಡಿ ವಿಡಿಯೋ, ಫೋಟೋ ಹಾಕುವವರನ್ನು ಹುಡುಕಿ ಬಂಧಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!