ಉದಯವಾಹಿನಿ, ನವದೆಹಲಿ: ಜನರ ಆರೋಗ್ಯ ರಕ್ಷಣೆಯಲ್ಲಿ ಜಾಗತಿಕವಾಗಿ ಒಂದು ಹೆಜ್ಜೆ ಮುಂದಿರುವ ಭಾರತ, ತಾಯಿ-ಮಕ್ಕಳ ಆರೋಗ್ಯ ಕಾಪಾಡುವಲ್ಲಿ ವಿಶ್ವಕ್ಕೇ ಮಾದರಿಯಾಗಿದೆ. ʼಇಂದ್ರಧನುಷ್ʼ ನಂತಹ ಅತ್ಯದ್ಭುತ ಕಾರ್ಯ ಯೋಜನೆ ಹಾಕಿಕೊಂಡು ಮಕ್ಕಳಲ್ಲಿ ʼಶೂನ್ಯ ಡೋಸ್ʼ ಪ್ರಮಾಣವನ್ನು ಕೇವಲ 0.06%ಕ್ಕೆ ಇಳಿಸುವಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಗತ್ತಿನ 2ನೇ ಅತಿ ದೊಡ್ಡ ರಾಷ್ಟ್ರವಾಗಿದ್ದರೂ ಜನರ ಆರೋಗ್ಯ ಸಂರಕ್ಷಣೆಯಲ್ಲಿ ಭಾರತ ಹಿಂದೆ ಬಿದ್ದಿಲ್ಲ. ಅದರಲ್ಲೂ ತಾಯಿ-ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಒಂದು ಕೈ ಮುಂದೆಯೇ ಇದೆ. ʼಇಂದ್ರಧನುಷ್ʼನಂತಹ ಯೋಜನೆ (Mission Indradhanush) ಮೂಲಕ ಎಲ್ಲ ಮಕ್ಕಳನ್ನೂ ಲಸಿಕೆ ವ್ಯಾಪ್ತಿಗೆ ಕರೆತರುವಲ್ಲಿ ಯಶ ಕಂಡಿದ್ದು, ವಿಶ್ವಸಂಸ್ಥೆಯೇ ಶ್ಲಾಘಿಸುವ ಮಟ್ಟಿಗೆ ಸಾಧನೆಗೈದಿದೆ.
ಭಾರತದಲ್ಲಿ ಒಂದೂ ಲಸಿಕೆ ಪಡೆಯದೇ ಇದ್ದ ʼಶೂನ್ಯ-ಡೋಸ್ʼ ಮಕ್ಕಳ ಪ್ರಮಾಣ 2023ರಲ್ಲಿ ಶೇ.0.11ರಷ್ಟಿತ್ತು. ಅದನ್ನೀಗ 2024ರ ವೇಳೆಗಾಗಲೇ ಶೇ.0.06ಕ್ಕೆ ಅಂದರೆ ಅರ್ಧದಷ್ಟು ಇಳಿಕೆಗೆ ತಂದಿದೆ. ರಾಷ್ಟ್ರೀಯ ರೋಗನಿರೋಧಕ ಪ್ರಯತ್ನಗಳಲ್ಲಿ ಇತಿಹಾಸದಲ್ಲೇ ಮೊದಲ ಬಾರಿ ಎನ್ನುವಂತೆ ಹೊಸ ದಾಖಲೆ ನಿರ್ಮಿಸಿದ್ದು, ಮಕ್ಕಳ ರೋಗನಿರೋಧಕ ಶಕ್ತಿಯಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ.
ಜಗತ್ತಿನ ಅತಿದೊಡ್ಡ ಲಸಿಕಾ ಅಭಿಯಾನ ʼಇಂದ್ರಧನುಷ್ʼ: ತಾಯಿ-ಮಕ್ಕಳ ಆರೋಗ್ಯ ಸಂರಕ್ಷಣೆಯಲ್ಲಿ ʼಇಂದ್ರಧನುಷ್ʼ ಭಾರತದ ಒಂದು ಅತ್ಯಂತ ಯಶಸ್ವಿ ಕಾರ್ಯ ಯೋಜನೆ. ಮಾತ್ರವಲ್ಲದೆ, ಮಕ್ಕಳಿಗೆ 12ಕ್ಕೂ ಅಧಿಕ ರೋಗಗಳ ವಿರುದ್ಧ ರಕ್ಷಣೆ ನೀಡುವಂಥ ಜಗತ್ತಿನ ಅತಿ ದೊಡ್ಡ ಲಸಿಕಾ ಅಭಿಯಾನ ಸಹ ಆಗಿದೆ.
ಸಾರ್ವತ್ರಿಕ ರೋಗ ನಿರೋಧಕ ಕಾರ್ಯಕ್ರಮದಡಿ (UIP) ಪ್ರತಿ ವರ್ಷ ಸುಮಾರು 2.6 ಕೋಟಿ ಶಿಶುಗಳು ಮತ್ತು 2.9 ಕೋಟಿ ಗರ್ಭಿಣಿಯರಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಭವಿಷ್ಯದ ಕುಡಿಗಳ ರಕ್ಷಣೆಗಾಗಿ 2013ರಲ್ಲಿ ಇದ್ದದ್ದು 6 ಲಸಿಕೆ ಮಾತ್ರ. 2014ರ ಬಳಿಕ 5 ಹೊಸ ಲಸಿಕೆ ಸಹ ಸೇರಿಸಲಾಗಿದೆ. ಇದರಿಂದಾಗಿ ತಾಯಿ-ಮಕ್ಕಳ ಮರಣ ಪ್ರಮಾಣ ಗಣನೀಯ ಇಳಿಕೆಯಾಗಿದ್ದು, ಭಾರತ ಆರೋಗ್ಯ ಸಮೃದ್ಧಿಯತ್ತ ಹೆಜ್ಜೆ ಇಟ್ಟಿದೆ.
