ಉದಯವಾಹಿನಿ, ಬರ್ಮಿಂಗ್‌ಹ್ಯಾಮ್: ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದಿದ್ದ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಮಹಿಳಾ ತಂಡ 5 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಆದರೂ ಐದು ಪಂದ್ಯಗಳ ಮಹಿಳಾ ಟಿ20ಐ ಸರಣಿಯನ್ನು ಭಾರತ ತಂಡ 3-2 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ಆದರೆ, ಐದನೇ ಟಿ20ಐ ಪಂದ್ಯವನ್ನು ಆಡುವ ಮೂಲಕ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಮಾಜಿ ನಾಯಕ ಮಿಥಾಲಿ ರಾಜ್ ಅವರ ಹಲವು ವರ್ಷಗಳ ವಿಶ್ವ ದಾಖಲೆಯನ್ನು ಹರ್ಮನ್ ಮುರಿದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ ಮಹಿಳಾ ತಂಡ ಮೂರರಲ್ಲಿ ಗೆಲುವು ಪಡೆದಿದೆ. ಇದರ ಫಲವಾಗಿ ಇದೇ ಮೊದಲ ಬಾರಿ ಅಂಗ್ಲರ ನಾಡಿನಲ್ಲಿ ಇಂಗ್ಲೆಂಡ್ ಮಹಿಳಾ ತಂಡ 3-2 ಅಂತರದಲ್ಲಿ ಟಿ20ಐ ಸರಣಿಯನ್ನು ಗೆದ್ದಿದೆ. ಅದರಲ್ಲಿಯೂ ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಮಹಿಳಾ ತಂಡ ಈ ಐತಿಹಾಸಿಕ ಸಾಧನೆಯನ್ನು ಮಾಡಿದೆ. ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಅವರು ಕೇವಲ 15 ರನ್ ಗಳಿಸಿದರೂ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅವರು ವಿಶೇಷ ದಾಖಲೆಯನ್ನು ಬರೆದಿದ್ದಾರೆ.
ಮಿಥಾಲಿ ರಾಜ್ ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್ : ಹರ್ಮನ್‌ಪ್ರೀತ್ ಕೌರ್ ಅವರು ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ 182 ಪಂದ್ಯಗಳನ್ನು ಆಡಿದ್ದಾರೆ. ಅವರು 146 ಏಕದಿನ ಪಂದ್ಯಗಳು ಹಾಗೂ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆ ಮೂಲಕ ಅವರು ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪದಲ್ಲಿಯೂ 334 ಪಂದ್ಯಗಳನ್ನು ಆಡಿದ್ದಾರೆ. ಆ ಮೂಲಕ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲಾ ಸ್ವರೂಪದಲ್ಲಿಯೂ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಭಾರತದ ಆಟಗಾರ್ತಿ ಎಂಬ ನೂತನ ಮೈಲುಗಲ್ಲು ತಲುಪಿದ್ದಾರೆ. ಆ ಮೂಲಕ ಭಾರತದ ಪರ 333 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಮಿಥಾಲಿ ರಾಜ್ ಅವರ ದಾಖಲೆಯನ್ನು ಹರ್ಮನ್‌ಪ್ರೀತ್ ಕೌರ್ ಮುರಿದಿದ್ದಾರೆ.
