ಉದಯವಾಹಿನಿ, ರಾಮನಗರ: ತಾಲೂಕಿನ ಹಳ್ಳಿಮಾಳ ಗ್ರಾಮದ ಹೊರವಲಯದಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಅದೃಶ್ಯ ನಿಧಿಗಾಗಿ ಗುಂಡಿ ತೋಡಲಾಗಿದೆ. ಈ ವೇಳೆ ದೇವಾಲಯದ ಆಂಜನೇಯಸ್ವಾಮಿ ವಿಗ್ರಹಕ್ಕೂ ಹಾನಿಯುಂಟಾಗಿದೆ ಎಂಬ ಮಾಹಿತಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಹುಣ್ಣುಮೆ ರಾತ್ರಿಯ ನಿಧಿಗಾಗಿ ಕನ್ನ!: ಹುಣ್ಣುಮೆ ಮತ್ತು ಅಮಾವಾಸ್ಯೆ ರಾತ್ರಿಯಂದು ಈ ಅಪರಿಚಿತ ಕಾರ್ಯ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳೀಯರ ಪ್ರಕಾರ, ದೇವಸ್ಥಾನದ ಒಳಭಾಗದಲ್ಲಿ ಸುಮಾರು 10 ಅಡಿ ಆಳದ ಗುಂಡಿ ತೋಡಲಾಗಿದೆ. ಇದು ಸಂಪೂರ್ಣ ಯೋಜಿತ ರೀತಿಯಲ್ಲಿ ನಡೆದಿರಬಹುದೆಂಬ ಸಂದೇಹವಿದೆ.
ದಿನ ನಿತ್ಯದಂತೆ ಹತ್ತಿರದ ರೈತರೊಬ್ಬರು ದನ ಮೇಯಿಸಲು ಅರಣ್ಯ ಭಾಗದತ್ತ ಹೋಗಿದ್ದ ವೇಳೆ ದೇವಾಲಯದ ಒಳಗೆ ತೋಡಿದ ಗುಂಡಿ ಹಾಗೂ ಅಲ್ಲಿರುವ ಮಣ್ಣಿನ ರಾಶಿಯನ್ನು ಕಂಡು ಆಘಾತಕ್ಕೆ ಒಳಗಾದರು. ಕೂಡಲೇ ಈ ಮಾಹಿತಿಯನ್ನು ಗ್ರಾಮಸ್ಥರಿಗೆ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ. ಅಪರಾಧಿಗಳು ನಿಧಿ ಶೋಧದ ವೇಳೆ ಆಂಜನೇಯಸ್ವಾಮಿ ವಿಗ್ರಹಕ್ಕೂ ಹಾನಿ ಮಾಡಿದ್ದಾರೆ ಎಂಬ ಸುದ್ದಿ ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ದೇವರ ಪ್ರತಿಮೆ ವಿಕೃತಗೊಂಡಿರುವುದು ಭಕ್ತರಲ್ಲಿ ಆಕ್ರೋಶವನ್ನು ಮೂಡಿಸಿದೆ. ಇದು ಕೇವಲ ಕಾನೂನು ಭಂಗವಷ್ಟೇ ಅಲ್ಲ, ಧಾರ್ಮಿಕ ಭಾವನೆಗಳನ್ನೂ ಕುಗ್ಗಿಸುವ ಘಟನೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಹಿಂದೆ ದೇವಾಲಯದಲ್ಲಿ ನಿಧಿಗಾಗಿ ಯಾರಾದರೂ ಇಂತಹ ಕೃತ್ಯಗಳನ್ನು ಎಸಗಿದ್ದಾರೆ ಎಂಬ ಮೂಲದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಅಪರಾಧಿಗಳಿಗೆ ಭಾರೀ ಶಿಕ್ಷೆ ವಿಧಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
