ಉದಯವಾಹಿನಿ, ಬೆಂಗಳೂರು: ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದ ದಿಗ್ಗಜ ನಟಿ ಬಿ. ಸರೋಜಾ ದೇವಿ (Saroja Devi ) ಅವರು ಸೋಮವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಗಲಿದ ಹಿರಿಯ ನಟಿಗೆ ಸಿನಿಮಾರಂದ ಗಣ್ಯರು, ಪ್ರಮುಖ ನಟ, ನಟಿಯರು ಮತ್ತು ರಾಜಕಾರಣಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ
ಸರೋಜಾ ದೇವಿ ಅವರ ವೃತ್ತಿಜೀವನವು ದಶಕಗಳವರೆಗೆ ನಾಲ್ಕು ಪ್ರಮುಖ ಚಿತ್ರರಂಗಗಳಲ್ಲಿ ವಿಸ್ತರಿಸಿತ್ತು. ಎಂ.ಜಿ. ರಾಮಚಂದ್ರನ್ ಶಿವಾಜಿ ಗಣೇಶನ್, ಎನ್.ಟಿ. ರಾಮರಾವ್ ಜೊತೆಗೆ ನಟಿಸಿದ ಅವರು, ಬಾಲಿವುಡ್‌ನ ದಿಲೀಪ್ ಕುಮಾರ್ (ಪೈಗಾಮ್, 1959), ರಾಜೇಂದ್ರ ಕುಮಾರ್ (ಸಸುರಾಲ್, 1961), ಮತ್ತು ಸುನಿಲ್ ದತ್ (ಬೇಟಿ ಬೇಟೆ, 1964) ಜೊತೆಯೂ ಕೆಲಸ ಮಾಡಿದ್ದರು.
ಮೊದಲ ಯಶಸ್ಸು: 17ನೇ ವಯಸ್ಸಿನಲ್ಲಿ ಕನ್ನಡದ ಕ್ಲಾಸಿಕ್ ಚಿತ್ರ ‘ಮಹಾಕವಿ ಕಾಳಿದಾಸ’ (1955) ಮೂಲಕ ಬಣ್ಣ ಹಚ್ಚಿದ ಸರೋಜಾ ದೇವಿ, ತಮ್ಮ ಪ್ರಭಾವಿ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿದರು. ತಮಿಳಿನ ‘ನಾಡೋಡಿ ಮನ್ನನ್’ (1958) ಚಿತ್ರವು ದಕ್ಷಿಣ ಭಾರತದಾದ್ಯಂತ ಅವರಿಗೆ ಖ್ಯಾತಿಯನ್ನು ತಂದಿತು. 1967ರಲ್ಲಿ ವಿವಾಹವಾದರೂ ಅವರು ವರ್ಷಗಟ್ಟಲೆ ಪ್ರಮುಖ ನಾಯಕಿಯಾಗಿ ಮಿಂಚಿದರು.
