ಉದಯವಾಹಿನಿ, ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಇಂದು ಬೆಂಗಳೂರಿಗೆ ಆಗಮಿಸಿ ಶಾಸಕರು ಹಾಗೂ ಸಚಿವರ ಜೊತೆ ಮೂರನೇ ಸುತ್ತಿನ ಸಮಾಲೋಚನಾ ಸಭೆಯನ್ನು ಮುಂದುವರೆಸಿದ್ದಾರೆ.ಈಗಾಗಲೇ ಎರಡು ಹಂತದಲ್ಲಿ ಶಾಸಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಿರುವ ಸುರ್ಜೇವಾಲ, ಮೂರನೇ ಹಂತದಲ್ಲಿ ಹದಿನೈದಕ್ಕೂ ಹೆಚ್ಚು ಮಂದಿ ಶಾಸಕರು ಹಾಗೂ ಮೊದಲ ದಿನ 10ಕ್ಕೂ ಹೆಚ್ಚು ಮಂದಿ ಸಚಿವರ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಈ ಮೊದಲು ಶಾಸಕರ ಜೊತೆಗಿನ ಸಮಾಲೋಚನೆ ವೇಳೆ ಬಹಳಷ್ಟು ಮಂದಿ ತಮ ಅಸಮಾಧಾನವನ್ನು ಹೊರಹಾಕಿದ್ದರು. ಸಚಿವರ ಸ್ಪಂದನೆ ಕುರಿತಾಗಿ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಸುರ್ಜೇವಾಲ ಇಂದಿನಿಂದ ಮೂರು ದಿನಗಳ ಕಾಲ ಸಚಿವರ ಜೊತೆ ನಿರಂತರ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಜು.16 ರಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಜೊತೆ ಅಂತಿಮ ಸುತ್ತಿನ ಸಭೆ ನಡೆಸಿ ಸರ್ಕಾರ, ಪಕ್ಷದ ಆಗುಹೋಗುಗಳ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಲಿದ್ದು, ಭವಿಷ್ಯದ ದಿಕ್ಕಿಗೆ ಹೊಸ ಮಾರ್ಗಸೂಚಿಗಳನ್ನು ರೂಪಿಸಲಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ಬಿಜೆಪಿ, ಜೆಡಿಎಸ್‌‍ ಕಡೆಯಿಂದ ಆಪರೇಷನ್‌ ಕಮಲ ಚಾಲನೆಗೊಂಡಿದ್ದು, ಒಳಗೊಳಗೇ ಏಜೆಂಟರುಗಳ ಮೂಲಕ ಕೆಲ ಶಾಸಕರನ್ನು ಸಂಪರ್ಕಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಸುರ್ಜೇವಾಲ ತಮ ಪಕ್ಷದ ಶಾಸಕರನ್ನು ಬಂದೋಬಸ್ತ್‌ ಮಾಡಿಕೊಳ್ಳಲು ಪ್ರತ್ಯೇಕ ಸಮಾಲೋಚನೆ ನಡೆಸಿದ್ದಾರೆ. ಅಭಿವೃದ್ಧಿ ವಿಚಾರಗಳ ಚರ್ಚೆಯ ನೆಪದಲ್ಲಿ ಬಿಜೆಪಿ ಅಥವಾ ಜೆಡಿಎಸ್‌‍ ಕಡೆಯಿಂದ ಯಾರಾದರೂ ತಮನ್ನು ಸಂಪರ್ಕಿಸಿದ್ದಾರೆಯೇ?, ಯಾವ ರೀತಿ ಮಾತುಕತೆಗಳಾಗಿವೆ?, ಎಂತಹ ಆಮಿಷಗಳನ್ನು ಮುಂದೊಡ್ಡಿದ್ದಾರೆ?, ನಿಮನ್ನು ಸಂಪರ್ಕಿಸುತ್ತಿರುವ ಏಜೆಂಟರುಗಳ ಮಾಹಿತಿ ಏನು? ಎಂಬೆಲ್ಲಾ ವಿಚಾರವನ್ನು ಸುರ್ಜೇವಾಲ ಶಾಸಕರನ್ನು ಕೇಳಿ ಮಾಹಿತಿ ಪಡೆದುಕೊಂಡಿದ್ದಾರೆ.ಸರ್ಕಾರದಲ್ಲಿ ಸಚಿವರ ನಿರ್ಲಕ್ಷ್ಯ ಶಾಸಕರ ಅಸಮಾಧಾನಕ್ಕೆ ಕಾರಣವಾಗಿ ಆಪರೇಷನ್‌ ಕಮಲ ಯಶಸ್ವಿಗೆ ವೇದಿಕೆ ಕಲ್ಪಿಸಿಕೊಡಬಹುದು ಎಂಬ ಆತಂಕದಿಂದ ಸುರ್ಜೇವಾಲ ನಡೆಸಿರುವ ರಹಸ್ಯ ಮಾತುಕತೆಗಳು ಬಹುಮುಖ್ಯ ಪಾತ್ರವಹಿಸಿವೆ.

Leave a Reply

Your email address will not be published. Required fields are marked *

error: Content is protected !!