ಉದಯವಾಹಿನಿ, ಬೆಂಗಳೂರು: ಶಕ್ತಿ ಯೋಜನೆ ಭರ್ಜರಿ ಯಶಸ್ಸನ್ನು ಕಾಂಗ್ರೆಸ್ ಪಕ್ಷ ನಾಡಿನಾದ್ಯಂತ ಸಂಭ್ರಮಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಬಿಎಂಟಿಸಿ ಬಸ್‌ನಲ್ಲಿ ಶಕ್ತಿ ಯೋಜನೆಯ ಐದನೂರನೇ ಕೋಟಿ ಫಲಾನುಭವಿಗೆ ಖುದ್ದು ಉಚಿತ ಟಿಕೆಟ್ ವಿತರಿಸಿದರು. ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ಕಾವೇರಿಯ ಬಳಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಚಿವರಾದ ಎಚ್.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ್, ದಿನೇಶ್‌ಗುಂಡೂರಾವ್, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯರೆಡ್ಡಿ ಅವರೊಂದಿಗೆ ಬಸ್ ಹತ್ತಿದ ಸಿದ್ದರಾಮಯ್ಯ ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಟಿಕೆಟ್ ವಿತರಿಸಿದರು. ಶಕ್ತಿ ಯೋಜನೆಯ ಯಶಸ್ಸಿಗಾಗಿ ಬೆಂಗಳೂರಷ್ಟೇ ಅಲ್ಲ ರಾಜ್ಯಾದ್ಯಂತ ಮಹಿಳಾ ಪ್ರಯಾಣಿಕರನ್ನು ಸನಾನಿಸಲಾಗಿದೆ.
ಮಹಿಳಾ ಪ್ರಯಾಣಿಕರಿಗೆ ಸನಾನ : ಮುಖ್ಯಮಂತ್ರಿಯವರು 30 ಮಹಿಳೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಪ್ರಯಾಣಿಕರಿಗೆ ಇಳಕಲ್ ಸೀರೆ ವಿತರಿಸಿದರು. ಲತಾ ಎಂಬ ಪ್ರಯಾಣಿಕರಿಗೆ ಆನೆಯ ಕಲಾಕೃತಿಯನ್ನು ನೀಡಿ, ಶ್ರೀಗಂಧದ ಹಾರ ಹಾಕಿ ಸನಾನಿಸಿದರು. ಇದೇ ವೇಳೆ ರಾಜ್ಯಾದ್ಯಂತ ಸಿಹಿ ಹಂಚಿ ಸಂಭ್ರಮಿಸಲಾಗಿದೆ.ಮುಖ್ಯಮಂತ್ರಿಯವರನ್ನು ಕಂಡು ಪುಳಕಿತರಾದ ಮಹಿಳೆಯರು ಹಸ್ತಲಾಘವ ನೀಡಿ ಸಂಭ್ರಮಿಸಿದರು.ಈ ವೇಳೆ ಮಹಿಳೆಯರನ್ನು ಸನಾನಿಸಲು ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ ಅವರನ್ನು ಜೊತೆಯಲ್ಲಿ ಕರೆದು ನಿಲ್ಲಿಸಿಕೊಂಡಿದ್ದು ವಿಶೇಷವಾಗಿತ್ತು. ದೇಶದಲ್ಲೇ ಎಂದೂ ಇಲ್ಲದಂತಹ ಅಪರೂಪದ ಯೋಜನೆಗಳನ್ನು ಸಿದ್ದರಾಮಯ್ಯನವರ ಸರ್ಕಾರ ಜಾರಿಗೆ ತಂದಿದ್ದು, ಮಹಿಳೆಯರಿಗೆ ರಾಜ್ಯದಲ್ಲಿ ಚಾಮರಾಜನಗರದಿಂದ ಬೀದರ್‌ವರೆಗೂ, ಮಂಗಳೂರಿನಿಂದ ಕೋಲಾರದವರೆಗೂ ಯಾವ ಮೂಲೆಗಾದರೂ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಯನ್ನು 2023 ರ ಜೂನ್11 ರಂದು ಜಾರಿಗೊಳಿಸಲಾಯಿತು. ಅಂದಿನಿಂದ ಇಲ್ಲಿವರೆಗೂ 500 ಕೋಟಿ ಬಸ್ ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಗಿದೆ. ಇದಕ್ಕಾಗಿ 12,699 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.
