ಉದಯವಾಹಿನಿ, ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದೆ. ಈ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿರುವ ಮಹಿಳೆಯರ ಸಂಖ್ಯೆ 500 ಕೋಟಿ ಗಡಿ ದಾಟಿದ್ದು, 500ನೇ ಕೋಟಿಯ ಟಿಕೆಟ್ ಅನ್ನು ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸೋಮವಾರ ವಿತರಣೆ ಮಾಡಿದರು.ಚಾಮರಾಜಪೇಟೆ ನಿವಾಸಿ ಲತಾ ಎಂಬುವವರಿಗೆ 500ನೇ ಕೋಟಿಯ ಟಿಕೆಟ್ ನೀಡಲಾಗಿದೆ. ಈ ವೇಳೆ ಸಿಎಂಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ರಾಮಲಿಂಗಾರೆಡ್ಡಿ ಸಿಎಂಗೆ ಸಾಥ್ ನೀಡಿದರು. ಸಿಎಂ ಟಿಕೆಟ್ ವಿತರಣೆ ವೇಳೆ ಬಸ್‌ನಲ್ಲಿದ್ದ ಮಹಿಳೆಯರಿಗೆ ಇಳಕಲ್ ಸೀರೆ ಹಾಗೂ ಸಿಹಿ ವಿತರಿಸಲಾಯಿತು. ಇದೇ ವೇಳೆ ಶಕ್ತಿ ಯೋಜನೆ ಫಲಾನುಭವಿಯೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ಉತ್ತರ ಕರ್ನಾಟಕದ ಖಡಕ್ ರೊಟ್ಟಿ ಹಾಗೂ ಶೇಂಗಾ ಹೋಳಿಗೆ ನೀಡಿ ಹಾರೈಸಿದರು.
ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಶಕ್ತಿ ಯೋಜನೆಯಡಿ ಉದ್ಯೋಗ, ಶಿಕ್ಷಣ, ಆರೋಗ್ಯ ಇನ್ನು ಮುಂತಾದ ಕಾರಣಗಳಿಗಾಗಿ ನಾಡಿನ ಹೆಣ್ಣುಮಕ್ಕಳು ಸಾರಿಗೆ ಬಸ್‌ಗಳಲ್ಲಿ 500 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ಈ ಯೋಜನೆಯ ಯಶಸ್ಸಿನ ಶ್ರೇಯ ರಾಜ್ಯದ ಹೆಣ್ಣುಮಕ್ಕಳಿಗೆ ಸಲ್ಲಬೇಕು. ನಾಡಿನಲ್ಲಿ ಶಕ್ತಿ ಸಂಚಾರ ಮತ್ತಷ್ಟು ಯಶಸ್ವಿಯಾಗಲಿ ಎಂದು ಹೇಳಿದರು.
