ಉದಯವಾಹಿನಿ, ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಗ್ಯಾಂಗ್‌ಗೆ ಸಂಬಂಧಿತ ಅಪಹರಣ ಮತ್ತು ಚಿತ್ರಹಿಂಸೆ ಪ್ರಕರಣಗಳ ತನಿಖೆಯ ಸಂಬಂಧ ಭಾರತೀಯ ಮೂಲದ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಬಂಧಿತರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಬೇಕಾಗಿರುವ ಪಂಜಾಬ್‌ನ ಗ್ಯಾಂಗ್‌ಸ್ಟರ್ ಪವಿತ್ತರ್ ಸಿಂಗ್ ಬಟಾಲಾ ಕೂಡ ಸೇರಿದ್ದಾನೆ. ಬಟಾಲಾ ನಿಷೇಧಿತ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ) ಜೊತೆ ಸಂಬಂಧ ಹೊಂದಿದ್ದು, ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ಎನ್‌ಐಎ ಆರೋಪಿಸಿದೆ.
ಜುಲೈ 11 ರಂದು ಎಫ್‌ಬಿಐ ಸ್ವಾಟ್, ಸ್ಟಾಕ್‌ಟನ್ ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಷೆರಿಫ್ ಕಚೇರಿಗಳನ್ನು ಒಳಗೊಂಡಂತೆ ಹಲವು ತಂಡಗಳು ಸ್ಯಾನ್ ಜೊವಾಕಿನ್ ಕೌಂಟಿಯಲ್ಲಿ ಐದು ಸಂಘಟಿತ ಶೋಧ ಕಾರ್ಯಾಚರಣೆಗಳನ್ನು ನಡೆಸಿವೆ ಎಂದು ಕ್ಯಾಲಿಫೋರ್ನಿಯಾದ ಸ್ಯಾನ್ ಜೊವಾಕಿನ್ ಕೌಂಟಿ ಷೆರಿಫ್ ಕಚೇರಿಯ ಹೇಳಿದೆ.ಬಂಧಿತ ಆರೋಪಿಗಳನ್ನು ದಿಲ್‌ಪ್ರೀತ್ ಸಿಂಗ್, ಅರ್ಶ್‌ಪ್ರೀತ್ ಸಿಂಗ್, ಅಮೃತ್‌ಪಾಲ್ ಸಿಂಗ್, ವಿಶಾಲ್, ಪವಿತ್ತರ್ ಸಿಂಗ್, ಗುರ್ತಾಜ್ ಸಿಂಗ್, ಮನ್‌ಪ್ರೀತ್ ರಂಧಾವಾ ಮತ್ತು ಸರಬ್‌ಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಭಾರತೀಯ ಗುಪ್ತಚರ ಸಂಸ್ಥೆಗಳ ಪ್ರಕಾರ, ಈ ಎಂಟೂ ಜನರು ಗ್ಯಾಂಗ್‌ಸ್ಟರ್-ಭಯೋತ್ಪಾದಕ ಜಾಲದ ಭಾಗವಾಗಿದ್ದಾರೆ. ಶೋಧ ಕಾರ್ಯಾಚರಣೆಯಲ್ಲಿ ಐದು ಬಂದೂಕುಗಳು, ಒಂದು ಅಟ್ಯಾಕ್ ರೈಫಲ್, ದೊಡ್ಡ ಪ್ರಮಾಣದ ಮದ್ದುಗುಂಡುಗಳು, ಹೆಚ್ಚಿನ ಸಾಮರ್ಥ್ಯದ ಮ್ಯಾಗಜೀನ್‌ಗಳು ಮತ್ತು 15,000 ಡಾಲರ್‌ಗಿಂತ ಹೆಚ್ಚಿನ ನಗದು ವಶಪಡಿಸಿಕೊಳ್ಳಲಾಗಿದೆ.
