ಉದಯವಾಹಿನಿ, ಹೈದರಾಬಾದ್: ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಹರಿ ಹರ ವೀರ ಮಲ್ಲು’ ಜುಲೈ 24ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಹಲವು ದಿನಗಳ ಬಳಿಕ ಪವನ್ ತೆರೆ ಮೇಲೆ ಬರಲಿದ್ದು, ಫ್ಯಾನ್ಸ್ ಕಣ್ತುಂಬಿಕೊಳ್ಳಲು ಕುತೂಹಲದಿಂದ ಕಾಯುತ್ತಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯಭರದಿಂದ ಸಾಗಿದೆ. ಇದೀಗ ನಿರ್ದೇಶಕ ಜ್ಯೋತಿ ಕೃಷ್ಣ ‘ಹರಿ ಹರ ವೀರ ಮಲ್ಲು’ ಚಿತ್ರದ ಕುರಿತಾಗಿ ಅಪರೂಪದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಪವನ್ ಕಲ್ಯಾಣ್ ಅವರ ಪಾತ್ರವನ್ನು ನಟರಾದ ಎನ್‌ಟಿಆರ್ ಮತ್ತು ಎಂಜಿಆರ್ ಅವರಿಂದ ಸ್ಫೂರ್ತಿ ಪಡೆದು ರಚಿಸಿದ್ದಾಗಿ ಹೇಳಿದ್ದಾರೆ. ಎನ್‌ಟಿಆರ್ ಮತ್ತು ಎಂಜಿಆರ್‌ರಂತಹ ಐಕಾನಿಕ್ ವ್ಯಕ್ತಿಗಳಂತೆಯೇ ಪವನ್ ಕೂಡ ಅದ್ಭುತ ಕಲಾವಿದ ಎಂದು ಹೇಳಿದ್ದಾರೆ.
ಜ್ಯೋತಿ ಕೃಷ್ಣ ಮಾತನಾಡಿ, ಧರ್ಮಪರ, ಜನರ ಪರವಾಗಿರುವ ಎಂಬ ಪವನ್ ಕಲ್ಯಾಣ್ ಅವರ ಇಮೇಜ್ ಅನ್ನು ಗಮನದಲ್ಲಿಟ್ಟುಕೊಂಡು ‘ಹರಿಹರ ವೀರಮಲ್ಲು’ ಚಿತ್ರದಲ್ಲಿನ ಪಾತ್ರವನ್ನು ಎಚ್ಚರಿಕೆಯಿಂದ ಕಟ್ಟಿಕೊಡಲಾಗಿದೆ. ಮುಖ್ಯಮಂತ್ರಿ ಆದ ನಂತರವೂ ಎಂಜಿಆರ್ ಸಂದೇಶಪೂರ್ಣ ಸಿನಿಮಾಗಳನ್ನು ಮಾಡುತ್ತಾ ನಟನಾ ಜೀವನವನ್ನು ಮುಂದುವರಿಸಿದ್ದರು. ಈ ಅಂಶ ನನಗೆ ಸ್ಫೂರ್ತಿ ನೀಡಿತು. ಅದಕ್ಕಾಗಿಯೇ ‘ಹರಿಹರ ವೀರಮಲ್ಲು’ ಚಿತ್ರದಲ್ಲಿ ‘ಮಾತು ಕೇಳಿ’ ಎಂಬ ಶಕ್ತಿಯುತ, ಚಿಂತನಶೀಲ ಹಾಡನ್ನು ಸೇರಿಸಿದ್ದೇವೆ. ಈ ಹಾಡಿನ ಸಾರ ಪವನ್ ಅವರ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕತೆ, ಧರ್ಮವನ್ನು ಅಳವಡಿಸಿಕೊಳ್ಳುವುದನ್ನು ತಿಳಿಸುತ್ತದೆ. ಈ ಹಾಡು ಪ್ರೇಕ್ಷಕರ ಮೇಲೆ ಉತ್ತಮ ಪ್ರಭಾವ ಬೀರಿದೆʼʼ ಎಂದು ಹೇಳಿದರು
